ಮಹಿಳೆಯರ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Dec 19 2024, 12:01 PM IST

CM Siddaramaiah Muda Site

ಸಾರಾಂಶ

ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುವರ್ಣ ವಿಧಾನಸೌಧ : ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬುಧವಾರ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿ ಯೋಜನೆಯ ಹಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯ ಹಣದಿಂದ ಬದುಕಿನ ಅವಕಾಶಗಳನ್ನು ಸೃಷ್ಟಿಸಿಕೊಂಡ 25 ಕ್ಕೂ ಹೆಚ್ಚು ಮಂದಿ ಫಲಾನುಭವಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಈ ಯೋಜನೆ ತಮ್ಮ ಜೀವನದಲ್ಲಿ ಹೊಸ ಚೈತನ್ಯ ತಂದಿದೆ ಎಂದು ಫಲಾನುಭವಿಗಳು ವಿವರಿಸಿದರು. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಹೇಳಿದರು ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ ಒಂದೇ ಮನೆಯ ಅತ್ತೆ ಸೊಸೆಯ ಮಧ್ಯೆ ಜಗಳ ತಂದಿದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ ಇಂದಿನ ಕಾರ್ಯಕ್ರಮಕ್ಕೆ ಅತ್ತೆಸೊಸೆಯರೇ ಜೊತೆ ಜೊತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯೋಜನೆಯಿಂದ ತಮಗಾಗಿರುವ ಲಾಭದ ಬಗ್ಗೆ ತಿಳಿಸಿದರು. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ, ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.