ಸಾರಾಂಶ
ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರಾಜ್ಯದ ಬಸ್‌ಗಳಿಗೆ ಮಸಿ ಬಳಿದು, ಚಾಲಕನಿಗೆ ತಿಲಕ ಇಟ್ಟು, ಬಲವಂತವಾಗಿ ಜೈ ಕರ್ನಾಟಕ ಘೋಷಣೆ ಕೂಗಿಸಿದ ಮರಾಠಿ ಪುಂಡರ ವರ್ತನೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಬೆಳಗಾವಿ/ಬೆಂಗಳೂರು : ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರಾಜ್ಯದ ಬಸ್‌ಗಳಿಗೆ ಮಸಿ ಬಳಿದು, ಚಾಲಕನಿಗೆ ತಿಲಕ ಇಟ್ಟು, ಬಲವಂತವಾಗಿ ಜೈ ಕರ್ನಾಟಕ ಘೋಷಣೆ ಕೂಗಿಸಿದ ಮರಾಠಿ ಪುಂಡರ ವರ್ತನೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಘಟನೆ ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯಗಳಲ್ಲಿ ಸೋಮವಾರ ಪ್ರತಿಭಟನೆಗಳು ನಡೆದವು. ಈ ಮಧ್ಯೆ, ನಿರ್ವಾಹಕನ ಮೇಲಿನ ಫೋಕ್ಸೋ ಪ್ರಕರಣ ರದ್ದು ಕೋರಿ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ನಾರಾಯಣ ಗೌಡರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಮಂಗಳವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಇದೇ ವೇಳೆ, ಮರಾಠಿ ಪುಂಡಾಟಿಕೆಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದ್ದು, ಆಡಳಿತಾರೂಢ ಪಕ್ಷದ ಸಚಿವರು, ಬಿಜೆಪಿ ಸೇರಿ ಪ್ರತಿಪಕ್ಷಗಳ ನಾಯಕರು ಕಿಡಿ ಕಾರಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮಾರಿಹಾಳ ಪೊಲೀಸ್ ಠಾಣೆ ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಸೋಮವಾರ ಪ್ರತಿಭಟನೆ ನಡೆಯಿತು. ಬಾಳೇಕುಂದ್ರಿ ಕ್ರಾಸ್ ಬಳಿ ಬೆಳಗಾವಿ-ಬಾಗಲಕೋಟೆ ಹೆದ್ದಾರಿ ಮೇಲೆ ಕಿತ್ತೂರು ಕರ್ನಾಟಕ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.
ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಕರವೇ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿದರು. ಇದೇ ವೇಳೆ, ಚಿಕ್ಕಮಗಳೂರು, ಮಂಡ್ಯಗಳಲ್ಲೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದವು.
ಇಂದು ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ:
ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಕನ್ನಡಿಗ ನಿರ್ವಾಹಕ ಮಹದೇವಪ್ಪ ಹುಕ್ಕೇರಿ ಮೇಲೆ ಸುಳ್ಳು ಫೋಕ್ಸೋ ಕೇಸು ದಾಖಲಿಸಿರುವುದನ್ನು ವಾಪಸ್ ಪಡೆಯಲು ಆಗ್ರಹಿಸಿ, ಮರಾಠಿಗರ ಪುಂಡಾಟ ಖಂಡಿಸಿ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ರಾಜಕೀಯ ನಾಯಕರ ಆಕ್ರೋಶ:
ಇದೇ ವೇಳೆ, ಮರಾಠಿಗರ ಪುಂಡಾಟಿಕೆ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದೆ. ಉದ್ದೇಶಪೂರ್ವಕವಾಗಿ ನಿರ್ವಾಹಕನ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಪ್ರಕರಣಕ್ಕೂ ಮೊದಲು ಪೊಲೀಸರು ಕಾಮನ್‌ಸೆನ್ಸ್ ಉಪಯೋಗಿಸಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ. ನಿರ್ವಾಹಕನ ಮೇಲಿನ ಹಲ್ಲೆ ಅತ್ಯಂತ ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಮರಾಠಿ ಪುಂಡರಿಗೆ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಅಲ್ಲದೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿ ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಘಟನೆಗೆ ಕಿಡಿ ಕಾರಿದ್ದು, ಮರಾಠಿಗರ ಪುಂಡಾಟ ತಡೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.