ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿಗೆ ಆಕ್ರೋಶ : ದಿನೇಶ್‌ ಗುಂಡೂರಾವ್‌ ವಜಾಕ್ಕೆ ಬಿಜೆಪಿ ಒತ್ತಾಯ

| Published : Dec 19 2024, 11:40 AM IST

Dinesh gundurao

ಸಾರಾಂಶ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಮತ್ತು ನವಜಾತ ಶಿಶುಗಳ ಮರಣ ಪ್ರಕರಣ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ರನ್ನು ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಜತೆಗೆ  ಹೈಕೋರ್ಟ್‌ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸುವರ್ಣ ವಿಧಾನಸಭೆ : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಮತ್ತು ನವಜಾತ ಶಿಶುಗಳ ಮರಣ ಪ್ರಕರಣ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ರನ್ನು ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಜತೆಗೆ ದುರ್ಘಟನೆ ಕುರಿತು ಹೈಕೋರ್ಟ್‌ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷದ ಬಿಜೆಪಿ ಆಗ್ರಹಿಸಿದೆ.

ಕಾಂಗ್ರೆಸ್‌ ಸರ್ಕಾರವು ಡ್ರಗ್‌ ಮಾಫಿಯಾ ಮುಷ್ಟಿಯಲ್ಲಿದ್ದು, ಇದೊಂದು ಕೊಲೆಗಡುಕ ಸರ್ಕಾರ ಎಂದೂ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಬಾಣಂತಿಯರ ಸಾವಿನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಬುಧವಾರ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಸರ್ಕಾರ ಮೈ ಮರೆತ ಪರಿಣಾಮವಾಗಿ ಬಾಣಂತಿಯರ ಸಾವು ಸಂಭವಿಸಿದೆ. ಬಳ್ಳಾರಿ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಬಾಣಂತಿಯರು ಸಾವಿಗೀಡಾಗಿದ್ದಾರೆ. ಆರೋಗ್ಯ ಇಲಾಖೆ ಎನ್ನುವುದು ಅನಾರೋಗ್ಯ ಇಲಾಖೆಯಾಗಿದೆ. ಅಧಿಕಾರಿಗಳು ಒಬ್ಬರ, ಮೇಲೊಬ್ಬರು ತಪ್ಪು ಹೊರೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದ 6 ದಿನಗಳ ನಂತರ ಆರೋಗ್ಯ ಸಚಿವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಅವರಿಗೂ ಜವಾಬ್ದಾರಿ ಇಲ್ಲವಾಗಿದೆ. ಘಟನೆಗೆ ಸಂಬಂಧಿಸಿ 2 ತಿಂಗಳ ಹಿಂದೆ ಬಂದ ಡ್ರಗ್‌ ಕಂಟ್ರೋಲರ್‌ನ್ನು ಅಮಾನತು ಮಾಡಿ ಬಲಿಪಶು ಮಾಡಿದ್ದಾರೆ ಎಂದು ಆರೋಪಿಸಿದರು.

ಡ್ರಗ್‌ ಮಾಫಿಯಾ ಮುಷ್ಟಿಯಲ್ಲಿ ಸರ್ಕಾರ: ರಾಜ್ಯದಲ್ಲಿ ಡ್ರಗ್‌ ಮಾಫಿಯಾ ಹೆಚ್ಚಾಗಿದ್ದು, ಸರ್ಕಾರ ಅದರ ಜತೆ ಕೈ ಜೋಡಿಸಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 250ಕ್ಕೂ ಹೆಚ್ಚಿನ ಔಷಧಿಗಳ ದಾಸ್ತಾನೇ ಇಲ್ಲ. ಅಲ್ಲದೆ, ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣ ಪೂರೈಸಿದ ಪಶ್ಚಿಮ ಬಂಗಾಳ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಲ್ಲೂ ಸರ್ಕಾರ ವಿಫಲವಾಗಿದೆ. ಈ ದ್ರಾವಣದ 37 ಬ್ಯಾಚ್‌ ಔಷಧ ಬಳಕೆ ಮಾಡದಂತೆ ಡ್ರಗ್‌ ಕಂಟ್ರೋಲರ್‌ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದರು. ಅಲ್ಲದೆ, ಅವುಗಳಲ್ಲಿ 4 ಬ್ಯಾಚ್‌ನ ಔಷಧದ ಬಳಕೆ ಅವಧಿ ಮುಗಿದಿದೆ ಎಂದು ತಿಳಿಸಲಾಗಿತ್ತು. ಆದರೂ ಅದನ್ನು ಬಳಸಲಾಗಿದೆ. ಅಲ್ಲದೆ, ಕಳಪೆ ಔಷಧ ಪೂರೈಸಿದ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತಾದರೂ ಕೆಳ ಹಂತದ ನ್ಯಾಯಾಲಯ ಅದಕ್ಕೆ ತಡೆ ನೀಡಿತು. ಆದರೆ, ಆ ತಡೆ ತೆರವು ಮಾಡಲು ಆರೋಗ್ಯ ಇಲಾಖೆಗೆ ಕ್ರಮವನ್ನೇ ಕೈಗೊಂಡಿಲ್ಲ. ಹೀಗಾಗಿಯೇ ದುರ್ಘಟನೆ ನಡೆದಿದೆ ಎಂದು ಅಶೋಕ್‌ ದೂರಿದರು.

ಔಷಧ ಪೂರೈಕೆಯಲ್ಲಿ ಮೋಸ ಮಾಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾಯ್ದೆ ಜಾರಿ ಮಾಡಬೇಕಿದೆ. ಅದಕ್ಕಾಗಿ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಬೇಕು. ಜತೆಗೆ ಹೈಕೋರ್ಟ್‌ ನ್ಯಾಯಾಧೀಶರೊಬ್ಬರ ಮೇಲ್ವಿಚಾರಣೆಯಲ್ಲಿ ಬಾಣಂತಿಯರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೊಲೆಗಡುಕ ಸಚಿವರ ವಜಾಗೊಳಿಸಿ: ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಲೋಪಗಳಿವೆ. ಸಮರ್ಪಕ ನೇಮಕಾತಿ ನಿಯಮ (ಸಿ ಆ್ಯಂಡ್‌ ಆರ್‌)ವಿಲ್ಲ. 12 ಸಾವಿರ ಕೋಟಿ ರು.ಗೂ ಹೆಚ್ಚಿನ ಬಜೆಟ್ ಹೊಂದಿರುವ ಇಲಾಖೆ ಶೇ.50ರಷ್ಟೂ ವೆಚ್ಚವಾಗುತ್ತಿಲ್ಲ. ರಾಷ್ಟ್ರೀಯ ಆರೋಗ್ಯ ಮಿಷನ್‌, 15ನೇ ಹಣಕಾಸು ಆಯೋಗದ ಅನುದಾನ ಬಳಕೆಯೂ ಸಮರ್ಪವಾಗಿ ಆಗುತ್ತಿಲ್ಲ. 108 ಆಂಬ್ಯುಲೆನ್ಸ್‌ಗಳಲ್ಲಿ ಜಿಪಿಎಸ್‌ ಅಳವಡಿಕೆಯಿಲ್ಲದ ಕಾರಣ ಸಮರ್ಪಕ ಸೇವೆ ಸಿಗುತ್ತಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ 761 ಔಷಧಗಳಿರಬೇಕು, ಆದರೆ 253 ಔಷಧಗಳು ಮಾತ್ರ ಲಭ್ಯವಿದೆ. ಹೀಗೆ ಸಾಕಷ್ಟು ಸಮಸ್ಯೆಗಳಿದ್ದು, ಅದನ್ನು ಸರಿಪಡಿಸಲು ಸರ್ಕಾರ ಮನಸು ಮಾಡುತ್ತಿಲ್ಲ ಎಂದು ದೂರಿದರು.

ಈ ಎಲ್ಲದರ ನಡುವೆ ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವು ಸಂಭವಿಸುತ್ತಿದೆ. ಸರ್ಕಾರ ಮೈ ಮರೆತಿದ್ದರ ಪರಿ ಣಾಮ ಈ ದುರ್ಘಟನೆ ಸಂಭವಿಸಿದೆ. ಬಾಣಂತಿಯರ ಸಾವಿನ ಕುರಿತು ಆಡಿಟ್‌ನಲ್ಲೂ ಸುಳ್ಳು ಹೇಳಲಾಗಿದೆ. ಬಾಣಂತಿಯರನ್ನು ಮನುಷ್ಯರೆಂದೇ ಪರಿಗಣಿಸಿದಂತೆ ಕಾಣುತ್ತಿಲ್ಲ. ಸಾವನ್ನೂ ವಹಿಸಿಕೊಳ್ಳಲಾಗುತ್ತಿದೆ. ಇದು ಕೊಲೆಗಡುಕ ಸರ್ಕಾರವಾಗಿದ್ದು, ನೇರವಾಗಿ ಜನರ ಕೊಲೆ ಮಾಡುತ್ತಿದೆ. ಆರೋಗ್ಯ ಇಲಾಖೆ ನಿರ್ವಹಿಸಲು ಸಾಧ್ಯವಾಗದ ದಿನೇಶ್‌ ಗುಂಡೂರಾವ್‌ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.