ಕನ್ನಡಪ್ರಭ ವಾರ್ತೆ ಬೆಳಗಾವಿ ಈ ಬಾರಿಯು ಫೆ.28 ಹಾಗೂ ಮಾ.1 ರಂದು ವೀರ ರಾಣಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಈ ಬಾರಿಯು ಫೆ.28 ಹಾಗೂ ಮಾ.1 ರಂದು ವೀರ ರಾಣಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ಮಲ್ಲಮ್ಮನ ಬೆಳವಡಿಯ ಸ್ಮಾರಕ ಭವನದಲ್ಲಿ ಗುರುವಾರ ಜರುಗಿದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ-2026 ರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಬೆಳವಡಿ ಮಲ್ಲಮ್ಮನ ಇತಿಹಾಸವನ್ನು ರಾಷ್ಟಕ್ಕೆ ತಿಳಿಸುವ ಕಾರ್ಯವಾಗಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕಾರ್ಯವಾಗಬೇಕಾಗಿದೆ. ಬೆಳವಡಿ ವ್ಯಾಪ್ತಿಯ ಎಲ್ಲ ಶಾಲೆಗಳಿಂದ ವೀರ ರಾಣಿ ಬೆಳವಡಿ ಮಲ್ಲಮ್ಮನ ಕುರಿತು ರೂಪಕ ತಯಾರಿಸಲು ಸೂಚಿಸಿದ ಅವರು, ಕಳೆದ ವರ್ಷದಂತೆ ಈ ಬಾರಿಯೂ ಬೆಳವಡಿ ಮಲ್ಲಮ್ಮ ಪ್ರಶಸ್ತಿಗಳನ್ನು ವಿತರಿಸಲಾಗಿವುದು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಧೈರ್ಯ ಹಾಗೂ ಶೌರ್ಯದ ಪ್ರತೀಕವಾದ ಬೆಳವಡಿ ಮಲ್ಲಮ್ಮನ ಉತ್ಸವವನ್ನು ಕಳೆದ ಬಾರಿಗಿಂತಲೂ ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುವುದು. ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವವು ಅತೀ ಪ್ರಮುಖವಾಗಿದ್ದು, ಉತ್ಸವದ ಕುರಿತು ಸ್ಥಳೀಯರು ಹೆಚ್ಚಿನ ಉತ್ಸುಕತೆ ಹೊಂದಬೇಕು. ಉತ್ಸವದ ಯಶಸ್ವಿಗಾಗಿ ರಚಿಸಲಾದ ಉಪ ಸಮಿತಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ವೀರರಾಣಿ ಬೆಳವಡಿ ಮಲ್ಲಮ್ಮಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿದರು.ಸಭೆಯಲ್ಲಿ ಬೆಳವಡಿ ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ಡಿವೈಎಸ್ಪಿ ವೀರಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ತಹಸೀಲ್ದಾರ್ ಹನುಮಂತ ಶಿರಹಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು, ಮುಖಂಡರು, ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.ಉತ್ಸವದ ಸಂದರ್ಭದಲ್ಲಿ ಪ್ರತಿವರ್ಷದಂತೆ ಬೆಳವಡಿ ಗ್ರಾಮದಲ್ಲಿ ದೀಪಾಲಂಕಾರ ಮಾಡಬೇಕು. ವೀರಜ್ಯೋತಿ ಮಾರ್ಗ ಬದಲಾವಣೆ, ಬೆಳವಡಿ ಮಲ್ಲಮ್ಮಳ ಸಂಕ್ಷಿಪ್ತ ಇತಿಹಾಸವುಳ್ಳ ಕರ ಪತ್ರಮುದ್ರಿಸಿ ವೀರಜ್ಯೋತಿ ಮಾರ್ಗದಲ್ಲಿ ಸಾರ್ವಜನಿಕರಿಗೆ ವಿತರಿಸುವ ಕಾರ್ಯವಾಗಬೇಕು. ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.ಬೆಳವಡಿ ಮಲ್ಲಮ್ಮ ಪ್ರಾಧಿಕಾರ ಸ್ಥಾಪಿಸಬೇಕು
ವಿಚಾರ ಸಂಕಿರಣಗಳಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಬೇಕು. ಉತ್ಸವದ ಕುರಿತು ವ್ಯಾಪಕ ಪ್ರಚಾರ, ಮರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹಾಗೂ ಕಲಾತಂಡಗಳಿಗೆ ಆದ್ಯತೆ ನೀಡುವದರ ಜೊತೆಗೆ ಉತ್ತಮ ಕಲಾವಿದರ ಆಯ್ಕೆ ಕುರಿತಂತೆ ಮುಖಂಡರು ಅನೇಕ ಸಲಹೆಗಳನ್ನು ನೀಡಿದರು.-------
ಕೋಟ್‌ಉತ್ಸವಕ್ಕೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರಿಗೆ ವೈಯಕ್ತಿಕವಾಗಿ ಆಮಂತ್ರಣ ನೀಡಲಾಗುವುದು. ಎರಡು ದಿನಗಳ ಕಾಲ ಜರುಗಲಿರುವ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗಿಯಾಗುವುದರ ಮೂಲಕ ಬೆಳವಡಿ ಮಲ್ಲಮ್ಮ ಉತ್ಸವವನ್ನು ಯಶಸ್ವಿಗೊಳಿಸಬೇಕಿದೆ.ಮಹಾಂತೇಶ ಕೌಜಲಗಿ, ಶಾಸಕರು