ಲಾಭದಲ್ಲಿ ಬೆಳವಾಡಿ ಕೃಷಿ ಸಹಕಾರಿ ಸಂಘ

| Published : Sep 07 2024, 01:37 AM IST

ಸಾರಾಂಶ

ಬೆಳವಾಡಿ ಕೃಷಿ ಪತ್ತಿನ ಸಹಕಾರಿ ಸಂಘವು 1976ರಲ್ಲಿ ಪ್ರಾರಂಭವಾಗಿ 2023-24ರ ವೇಳೆಗೆ ಸುಮಾರು 996 (ಷೇರುದಾರರನ್ನು) ಒಟ್ಟು 36 ಲಕ್ಷರೂಗಳ ಷೇರು ಹಣವನ್ನು ಹೊಂದಿದ್ದು, ಕೃಷಿ ಸಾಲ ಮರುಪಾವತಿಯಲ್ಲಿ ದಾಖಲೆಯನ್ನು ಹೊಂದಿದೆ. 2023-24ರಲ್ಲಿ ಒಟ್ಟು 5,91,000 (ಐದು ಲಕ್ಷದ ತೊಂಬತ್ತೊಂದು ಸಾವಿರ) ನಿವ್ವಳ ಲಾಭವನ್ನು ಗಳಿಸಿದೆ ಎಂದು ಬೆಳವಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದ ಆರ್‌ ನಿಂಗೇಗೌಡ ತಿಳಿಸಿದರು. 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲ ನಿರ್ದೇಶಕರ ಸಹಕಾರ ಸಲಹೆಗಳಿಂದ ಸಂಘವು ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ ಎಂದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ ಇಲ್ಲಿಗೆ ಸಮೀಪದ ಬೆಳವಾಡಿ ಕೃಷಿ ಪತ್ತಿನ ಸಹಕಾರಿ ಸಂಘವು 1976ರಲ್ಲಿ ಪ್ರಾರಂಭವಾಗಿ 2023-24ರ ವೇಳೆಗೆ ಸುಮಾರು 996 (ಷೇರುದಾರರನ್ನು) ಒಟ್ಟು 36 ಲಕ್ಷರೂಗಳ ಷೇರು ಹಣವನ್ನು ಹೊಂದಿದ್ದು, ಕೃಷಿ ಸಾಲ ಮರುಪಾವತಿಯಲ್ಲಿ ದಾಖಲೆಯನ್ನು ಹೊಂದಿದೆ. 2023-24ರಲ್ಲಿ ಒಟ್ಟು 5,91,000 (ಐದು ಲಕ್ಷದ ತೊಂಬತ್ತೊಂದು ಸಾವಿರ) ನಿವ್ವಳ ಲಾಭವನ್ನು ಗಳಿಸಿದೆ ಎಂದು ಬೆಳವಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದ ಆರ್‌ ನಿಂಗೇಗೌಡ ತಿಳಿಸಿದರು.

2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲ ನಿರ್ದೇಶಕರ ಸಹಕಾರ ಸಲಹೆಗಳಿಂದ ಸಂಘವು ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ. ಮರಣನಿಧಿಯನ್ನು ಸ್ಥಾಪಿಸಿ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ರೈತರಿಗೆ ಸಾಲ ಸೌಲಭ್ಯ ದೊರಕಿಸಿಕೊಡುತ್ತಿದ್ದು ಇನ್ನೂ ಹೆಚ್ಚಿನ ಪ್ರಗತಿ ಸಾದಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಇದೇ ವೇಳೆ ಹಾಸನ ಜಿಲ್ಲಾ ಕೇಂದ್ರ ಬ್ಯಾಂಕ್‌ನ ನೀರ್ದೇಶಕರಾದ ಕೆ ಸತೀಶ್‌ ಮಾತನಾಡಿ, ಅರಕಲಗೂಡು ತಾಲೂಕಿನಲ್ಲಿ ಸುಮಾರು 23 ಸಹಕಾರಿ ಸಂಘಗಳಿದ್ದು ಅವುಗಳಲ್ಲಿ ಬೆಳವಾಡಿ ಕೃಷಿ ಪತ್ತಿನ ಈ ಸಂಘವು ಅತ್ಯುತ್ತಮವಾಗಿ ಸೌಲಭ್ಯಗಳನ್ನು ಒದಗಿಸುತ್ತಿದ್ದು ಮಾದರಿಯೆನಿಸಿದೆ. ಸರ್ಕಾರದಿಂದ ಮತ್ತು ಜಿಲ್ಲಾ ಸಹಕಾರಿ ಸಂಘದಿಂದ ಹೆಚ್ಚಿನ ನೆರವು ಸೌಲಭ್ಯ ಕಲ್ಪಿಸಲು ಸದಾ ಸಿದ್ಧರಿರುವುದಾಗಿ ತಿಳಿಸಿದರು.

ಇದೇ ವೇಳೆ ಉಪಾಧ್ಯಕ್ಷರಾದ ಚನ್ನಯ್ಯ, ನಿರ್ದೇಶಕರು, ಷೇರುದಾರರು, ಮೇಲ್ವಿಚಾರಕರಾದ ಬಸವರಾಜು, ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾಪರಮೂರ್ತಿ ಹಾಜರಿದ್ದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ, ವಿಮೆ, ಗ್ರಾಹಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಬ್ಯಾಂಕ್‌ ಸಲಹೆಗಾರರಾದ ಮಂಜುಳ ಅವರು ಹಾಜರಿದ್ದ ರೈತ ವರ್ಗಕ್ಕೆ ಮಾಹಿತಿ ಒದಗಿಸಿದರು. CEO ದಯಾಪರಮೂರ್ತಿ ವರದಿ ಮಂಡಿಸಿದರು. ಅಶೋಕ್‌ ಕಾರ್ಯಕ್ರಮ ನಿರೂಪಿಸಿದರು.