ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೂ ಅಖಂಡ ಬಳ್ಳಾರಿ ಜಿಲ್ಲೆಗೂ ಬಿಡಿಸಲಾರದ ನಂಟು

| Published : Oct 27 2024, 02:26 AM IST

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೂ ಅಖಂಡ ಬಳ್ಳಾರಿ ಜಿಲ್ಲೆಗೂ ಬಿಡಿಸಲಾರದ ನಂಟು
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೂ ಅಖಂಡ ಬಳ್ಳಾರಿ ಜಿಲ್ಲೆಗೂ ಬಿಡಿಸಲಾರದ ನಂಟಿದೆ.

ಕೃಷ್ಣ ಎನ್. ಲಮಾಣಿ

ಹೊಸಪೇಟೆ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೂ ಅಖಂಡ ಬಳ್ಳಾರಿ ಜಿಲ್ಲೆಗೂ ಬಿಡಿಸಲಾರದ ನಂಟಿದೆ. ಜಿಲ್ಲೆಯ ಅರಣ್ಯ ಹಾಗೂ ಕಂದಾಯ ಜಮೀನುಗಳಲ್ಲಿ ಅಕ್ರಮವಾಗಿ ತೋಡಿದ ಅದಿರನ್ನು ರಿಸ್ಕ್‌ ಹಾಗೂ ಝೀರೋ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಅದಿರನ್ನು ಕಳ್ಳ ಮಾರ್ಗದಲ್ಲೇ ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು.

ಹೊಸಪೇಟೆ ಮೂಲದ ಸ್ವಸ್ತಿಕ್‌ ನಾಗರಾಜ್‌, ಕಾರದಪುಡಿ ಮಹೇಶ್, ಕೆ.ವಿ.ಗೋವಿಂದರಾಜ್‌ನಂಥವರು ಕಾರವಾರದ ಶಾಸಕ ಸತೀಶ್‌ ಸೈಲ್‌ ಅಂಥವರ ಜತೆಗೆ ನಂಟು ಬೆಳೆಸಿಕೊಂಡು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಅಕ್ರಮ ಗಣಿಗಾರಿಕೆ ಎಂಬುದು ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡತೊಡಗಿತ್ತು. ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕಲು ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿಯಲ್ಲಿ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಕುರಿತು ಉಲ್ಲೇಖಿಸಲಾಗಿತ್ತು.

ಸ್ವಸ್ತಿಕ್‌ ನಾಗರಾಜ್‌ ಆಗ ಹೊಸಪೇಟೆಯ ನಗರಸಭೆಯ ಉಪಾಧ್ಯಕ್ಷರು ಆಗಿದ್ದರು. ರಾಜಕಾರಣಿಗಳ ನಂಟು ಕೂಡ ಬೆಳೆಸಿಕೊಂಡಿದ್ದರು. ಕಾರದಪುಡಿ ಮಹೇಶ್‌ ಈಗ ಹೊಸಪೇಟೆ ನಗರಸಭೆ ಸದಸ್ಯ ಕೂಡ ಆಗಿದ್ದು, ಈಗ ಈ ಸದಸ್ಯತ್ವ ರದ್ದಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಇವರಿಬ್ಬರ ಹೆಸರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಸಿಬಿಐ ಹಲವು ಬಾರಿ ಇವರ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಿತ್ತು.

ಗಣಿಗಳಿಗೆ ಕುತ್ತು ತಂದ ಝೀರೋ:

ಅಖಂಡ ಬಳ್ಳಾರಿ ಜಿಲ್ಲೆ ಬ್ರಿಟಿಷರ ಕಾಲದಿಂದಲೂ ಕಬ್ಬಿಣದ ಅದಿರಿಗೆ ಭಾರೀ ಫೇಮಸ್ ಆಗಿತ್ತು. ವೈಜ್ಞಾನಿಕ ತಳಹದಿಯ ಮೇಲೆ ನಡೆಯುತ್ತಿದ್ದ ಗಣಿಗಾರಿಕೆಗೆ ಚೀನಾ ಭೂಮ್‌ ಅಕ್ರಮದ ಲೇಪನ ಹಚ್ಚಿತ್ತು. ಸರ್ಕಾರದ ಬೊಕ್ಕಸಕ್ಕೆ ರಾಜಧನ ಸಂದಾಯ ಮಾಡದೇ ಅನುಮತಿಯನ್ನು ಮೀರಿ ಅರಣ್ಯ ಹಾಗೂ ಕಂದಾಯ ಜಮೀನುಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯತೊಡಗಿತ್ತು.

ರಿಸ್ಕ್‌ ಹಾಗೂ ಝೀರೋ ಹೆಸರಿನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಅಖಂಡ ಜಿಲ್ಲೆಯ 100ಕ್ಕೂ ಅಧಿಕ ಗಣಿ ಕಂಪನಿಗಳಿಗೆ ಕುತ್ತು ತಂದಿತ್ತು. ಧಾರವಾಡದ ಎಸ್‌.ಆರ್‌. ಹಿರೇಮಠ ಅವರ ಎಸ್‌ಪಿಎಸ್‌ ಸಂಸ್ಥೆ ಸುಪ್ರೀಂ ಕೋರ್ಟ್‌ ತಟ್ಟಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರೀಯ ತನಿಖಾ (ಸಿಇಸಿ) ಸಂಸ್ಥೆಯನ್ನು ನೇಮಿಸಿತ್ತು. ಆಗ ಸಿಇಸಿ ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕಲು ಎ, ಬಿ, ಸಿ ಎಂದು ಮೂರು ಕೆಟಗರಿಯಲ್ಲಿ ಗಣಿಗಳನ್ನು ವಿಂಗಡಿಸಿತು. ಇದರಿಂದ ಗಣಿ ಕಂಪನಿಗಳಿಗೂ ಹೊಡೆತ ಬಿದ್ದಿತ್ತು. ರಿಸ್ಕ್‌ ಹಾಗೂ ಝೀರೋ ಹೆಸರಿನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಬಿಸಿ ಗಣಿ ಕಂಪನಿಗಳಿಗೂ ತಟ್ಟಿತು.

ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಕಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಸ್ವಸ್ತಿಕ್ ನಾಗರಾಜ್, ಐಎಲ್‌ಸಿಯ ಕೆ.ವಿ. ಗೋವಿಂದರಾಜ್‌ ಅವರಂಥವರು ಅಕ್ರಮ ಗಣಿಗಾರಿಕೆ ವ್ಯವಹಾರದಲ್ಲಿ ಕೋಟ್ಯಧೀಶರಾದರು.

ಬಳ್ಳಾರಿ, ಸಂಡೂರು, ಹೊಸಪೇಟೆ ಭಾಗದಲ್ಲಿ ನೋಡುನೋಡುತ್ತಲೇ ಆಗ ಸಾವಿರ ನೋಟಿನ ಕಂತೆಗಳು ಹರಿದಾಡ ತೊಡಗಿದವು. ಅಕ್ರಮ ಗಣಿಗಾರಿಕೆಯಿಂದ ಅಖಂಡ ಬಳ್ಳಾರಿ ಜಿಲ್ಲೆ ಚಿತ್ರಣವೇ ಬದಲಾಗಿತ್ತು. ಈಗ ಬೇಲೆಕೇರಿ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಇನ್ನಷ್ಟು ಪ್ರಕರಣಗಳಲ್ಲೂ ಪ್ರಭಾವಿಗಳಿಗೆ ಶಿಕ್ಷೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.