ಸಾರಾಂಶ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಕ್ತಿ 2K24 ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದ ಅಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಖ್ಯಾತ ಗಾಯಕ ವಿಜಯ ಪ್ರಕಾಶ ಗಾನಕ್ಕೆ ಇಡೀ ಬೆಳಗಾವಿ ಮನಸೋತು ತಲೆತೂಗಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಕ್ತಿ 2K24 ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದ ಅಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಖ್ಯಾತ ಗಾಯಕ ವಿಜಯ ಪ್ರಕಾಶ ಗಾನಕ್ಕೆ ಇಡೀ ಬೆಳಗಾವಿ ಮನಸೋತು ತಲೆತೂಗಿತು.ರಾಜಕುಮಾರ ಗೀತೆಯೊಂದಿಗೆ ಆರಂಭಸಿದ ವಿಜಯ ಪ್ರಕಾಶ ಅವರು, ನಂತರದಲ್ಲಿ ಮನಸಲ್ಲಿ ಅಲೆಲೆ, ಸಿಂಗಾರ ಸಿರಿಯೇ, ಯಾರೇ ಬಂದರೂ, ಪುನೀತ ಬಾಲ್ಯದ ನಮ್ಮ ಶಿವ ಕೈಲಾಸ ಸೇರಿಕೊಂಡನೋ ಮುಂತಾದ ಪ್ರಸಿದ್ಧ ಗೀತೆಗಳನ್ನ ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.
ಈ ಸಂಗೀತ ಸಂಜೆಯಲ್ಲಿ ಕುಲಪತಿ ಪ್ರೊ.ವಿದ್ಯಾಶಂಕರ ಎಸ್, ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಪ್ರೊ.ಟಿ.ಎನ್.ಶ್ರೀನಿವಾಸ, ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯ ಸನ್ನಿ ರಾಜ್, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಹಾಗೂ ನಗರದ ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 6000ಕ್ಕಿಂತ ಹೆಚ್ಚಿನ ಜನಸ್ತೋಮ ಸಂಗೀತ ಸಂಜೆಯ ಸವಿಯನ್ನು ಉಂಡರು. ಈ ಸಮಯದಲ್ಲಿ ವಿಟಿಯು ವತಿಯಿಂದ ವಿಜಯ ಪ್ರಕಾಶ ಅವರಿಗೆ ಸನ್ಮಾನಿಸಲಾಯಿತು. ಡಿಸಿಪಿ ಸ್ನೇಹಾ ನೇತೃತ್ವದಲ್ಲಿ ವಿಜಯ ಪ್ರಕಾಶ ಅವರು ಹೆಲ್ಮೆಟ್ ಹಾಕಿಕೊಳ್ಳುವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿದರು.ಇದಕ್ಕು ಮೊದಲು ನಡೆದ ಯುಕ್ತಿ 2K24 ದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ವಿ ಟಿ ಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್ ಬಹುಮಾನ ವಿತರಿಸಿದರು.