ಬೆಳಗಾವಿ ಕಾಂಗ್ರೆಸ್ ಸಮಾವೇಶ: ಜಿಲ್ಲೆಯಿಂದ 25 ಸಾವಿರ ಜನರು ಭಾಗಿ : ಶಾಸಕ ಹಿಟ್ನಾಳ

| Published : Dec 24 2024, 12:49 AM IST / Updated: Dec 24 2024, 12:31 PM IST

ಬೆಳಗಾವಿ ಕಾಂಗ್ರೆಸ್ ಸಮಾವೇಶ: ಜಿಲ್ಲೆಯಿಂದ 25 ಸಾವಿರ ಜನರು ಭಾಗಿ : ಶಾಸಕ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಿಂದ ಸುಮಾರು 25 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ.

 ಕೊಪ್ಪಳ : ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಿಂದ ಸುಮಾರು 25 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ನಗರಸಭೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವೇ ಹೆಮ್ಮೆಪಡುವ ಸಂಗತಿ ಇದಾಗಿದ್ದು, ಸ್ವಾಭಿಮಾನ ಇದ್ದವರೆಲ್ಲ ಬಂದು ಭಾಗವಹಿಸುತ್ತಾರೆ ಎಂದರು.

ಮಹಾತ್ಮಾಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮೊದಲ ಸಭೆಗೆ ಈಗ ಬರೋಬ್ಬರಿ 100 ವರ್ಷಗಳಾಗುತ್ತಿರುವ ಹಿನ್ನೆಲೆ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಆಯೋಜನೆ ಮಾಡಿದೆ.

ಅಂದು ನಡೆದ ಸಮಾವೇಶದಲ್ಲಿ ಜವಾಹರಲಾಲ ನೆಹರು, ಲಾಲಬಹದ್ದೂರು ಶಾಸ್ತ್ರೀ ಸೇರಿದಂತೆ ಕಾಂಗ್ರೆಸ್‌ನ ಹಿರಿಯರೆಲ್ಲರೂ ಭಾಗಿಯಾಗಿದ್ದರು. ಆ ಸಭೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಬೆಳಗಾವಿಯಲ್ಲಿ ಡಿ. 26, 27ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ದೇಶಾದ್ಯಂತದಿಂದ ಸುಮಾರು 25 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ದೇಶದ ಕಾಂಗ್ರೆಸ್‌ನ ಪರಮೋಚ್ಛ ನಾಯಕರೆಲ್ಲರೂ ಆಗಮಿಸುತ್ತಾರೆ ಎಂದರು.

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಆಗಿದ್ದರೂ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ನಾಯಕರನ್ನು ಸ್ಮರಿಸುವ ಕಾರ್ಯಕ್ರಮ ಆಗಿರುವುದರಿಂದ ದೇಶದ ಬಗ್ಗೆ ಸ್ವಾಭಿಮಾನ ಮತ್ತು ಅಭಿಮಾನ ಇರುವವರೆಲ್ಲರೂ ಪಕ್ಷಾತೀತವಾಗಿ ಭಾಗವಹಿಸಬಹುದು ಎಂದರು.

ಜಿಲ್ಲೆಯಿಂದಲೂ ಸಹ ದೊಡ್ಡ ಸಂಖ್ಯೆಯಲ್ಲಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಪಕ್ಷದ ಹಿರಿಯರು ಈಗಾಗಲೇ ಬೆಳಗಾವಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿದ್ದಾರೆ. ಸ್ವಯಂ ಪ್ರೇರಿತವಾಗಿಯೇ ಸಾವಿರಾರು ಸಂಖ್ಯೆಯ ಜನ ಆಗಮಿಸಲಿದ್ದಾರೆ ಎಂದರು.

ಜಾತ್ರೆಗೆ ಸಕಲ ಸಿದ್ಧತೆ:

ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾಗಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ನಗರಸಭೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಹದಿನೈದು ದಿನಗಳ ಕಾಲ ನಡೆಯುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಸುಮಾರು 30- 40 ಲಕ್ಷ ಭಕ್ತರು ಬಂದು ಹೋಗುತ್ತಾರೆ. ಹೀಗಾಗಿ, ತಾತ್ಕಾಲಿಕ ಶೌಚಾಲಯ ಸೇರಿದಂತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ದೂಳು ನಿಯಂತ್ರಕ್ಕಾಗಿ ಈಗಾಗಲೇ ಯಂತ್ರ ತರಿಸಲಾಗಿದೆ. ರಸ್ತೆಗಳ ಗುಂಡಿ ಮುಚ್ಚಲಾಗುತ್ತದೆ. ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಉಪಾಧ್ಯಕ್ಷೆ ವಿದ್ಯಾ ಗದಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಷಾ ಪಲ್ಟನ್, ಪೌರಾಯುಕ್ತ ಗಣಪತಿ ಪಾಟೀಲ್ ಇದ್ದರು.