ಬೆಳಗಾವಿ-ಧಾರವಾಡ ಮಾರ್ಗ; ಭೂಸ್ವಾಧೀನ ಪೂರ್ಣಗೊಳಿಸಿ: ಸಚಿವ ವಿ.ಸೋಮಣ್ಣ

| Published : Nov 15 2024, 12:33 AM IST

ಬೆಳಗಾವಿ-ಧಾರವಾಡ ಮಾರ್ಗ; ಭೂಸ್ವಾಧೀನ ಪೂರ್ಣಗೊಳಿಸಿ: ಸಚಿವ ವಿ.ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಕಾಮಗಾರಿ ಅನುಷ್ಠಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಕಾಮಗಾರಿ ಅನುಷ್ಠಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೂತನ ರೈಲು ಮಾರ್ಗ ಅನುಷ್ಠಾನಕ್ಕಾಗಿ ಧಾರವಾಡ ಜಿಲ್ಲಾ ವ್ಯಾಪ್ತಿಯ 42 ಎಕರೆ ಭೂಸ್ವಾಧೀನ ಮಾತ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸುವಂತೆ ತಿಳಿಸಿದರು.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜಿ ಅವರು ವಿಡಿಯೋ ಸಂವಾದ ಮೂಲಕ ಮಾತನಾಡಿ, ಅಗತ್ಯ ರೈಲು ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಗೆ 288 ಎಕರೆ ಒಳಪಟ್ಟಿದೆ. ಅಳತೆ ಕಾರ್ಯ ಪ್ರಗತಿಯಲ್ಲಿದೆ. ಆದರೆ ಅದರಲ್ಲಿ 42 ಎಕರೆ ಭೂಸ್ವಾಧೀನ ಪ್ರಕ್ರಿಯೆ ಸ್ಥಳೀಯ ಸಾರ್ವಜನಿಕರು ಹಾಗೂ ರೈತರಿಂದ ತಡೆ ಹಿಡಿಯಲಾಗಿದೆ. ಹಾಗಾಗಿ ಸ್ಥಳೀಯರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಭೂಮಾಪನ ಕಾರ್ಯ ಪೂರ್ಣಗೊಳಿಸಿದರೆ ಮುಂದಿನ ದಿನಗಳಲ್ಲಿ ರೈಲು ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ರೈಲ್ವೆ ಅಧಿಕಾರಿಗಳು, ಧಾರವಾಡ ಜಿಲ್ಲಾಧಿಕಾರಿಗಳು ಸ್ಥಳೀಯ ರೈತರೊಂದಿಗೆ ಆತ್ಮೀಯತೆಯಿಂದ ವರ್ತಿಸಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಬೆಳಗಾವಿ ವ್ಯಾಪ್ತಿಯಲ್ಲಿ ಅಡೆತಡೆಗಳಿಲ್ಲ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಈ ಮಾರ್ಗಕ್ಕೆ ಜಿಲ್ಲೆಯಲ್ಲಿ ಒಟ್ಟು 600.8 ಎಕರೆ ಜಮೀನು ಬರಲಿದೆ. ಇದರಲ್ಲಿ ಎರಡು ಭಾಗವಾಗಿ ವಿಂಗಡನೆ ಮಾಡಲಾಗಿದೆ. 444 ಮತ್ತು 155 ಎಕರೆ ಬೇರ್ಪಡಿಸಲಾಗಿದೆ. ಕಿತ್ತೂರು, ಹೂಲಿಕಟ್ಟಿ, ಎಂ.ಕೆ. ಹುಬ್ಬಳ್ಳಿ, ಬೆಳವಡಿ ಮತ್ತು ಕರವಿನಕೊಪ್ಪ ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಖಾನಾಪುರ-ದೇಸೂರು ಮಾರ್ಗವಾಗಿ ಬರುವ ರೈಲ್ವೆ ಮಾರ್ಗದ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಒಂದು ವೇಳೆ ಕಂಡುಬಂದರೆ ಸಮೀಕ್ಷೆ ನಡೆಸಿ ಸಮಸ್ಯೆ ಪರಿಹರಿಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಜಿಪಂ ಸಿಇಒ ರಾಹುಲ್ ಶಿಂಧೆ, ರೈಲ್ವೆ ವಿಭಾಗೀಯ ನಿರ್ವಾಹಕ ಹರ್ಷ ಕಾರೆ, ಹಿರಿಯ ರೈಲ್ವೆ ವಿಭಾಗೀಯ ನಿರ್ವಾಹಕ ಸಂತೋಷ ಹೆಗಡೆ, ಕಟ್ಟಡ ವಿಭಾಗದ ಮುಖ್ಯ ಅಭಿಯಂತರ ಸದ್ಧರ್ಮದೇವ, ರೈಲ್ವೆ ಅಧಿಕಾರಿಗಳು, ಕೆಐಡಿಬಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮಾಜಿ ಸಂಸದರು ಜಾರಿಗೆ ತಂದು ಸುಮಾರು 3 ವರ್ಷಗಳು ಕಳೆದಿವೆ. ಧಾರವಾಡ, ಬೆಳಗಾವಿ ಜಿಲ್ಲಾಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಕೂಡಲೇ ಸರ್ವೆ ಕಾರ್ಯ ಪೂರ್ಣಗೊಳಿಸಲು ಮುಂದಾಗಬೇಕು. ಕಿತ್ತೂರು ಮಾರ್ಗವಾಗಿ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಹಂತದಲ್ಲಿದೆ, ಮಮ್ಮಿಗಟ್ಟಿಯಲ್ಲಿ ಸ್ವಾಧೀನ ಕ್ರಿಯೆಯಲ್ಲಿ ಸುಮಾರು ದಿನಗಳಿಂದ ಸಮಸ್ಯೆ ಎದುರಾಗಿದ್ದು, ಸ್ಥಳೀಯರ ಜೊತೆ ಚರ್ಚಿಸಿ ಇತ್ಯರ್ಥ ಪಡಿಸಬೇಕು.

- ವಿ.ಸೋಮಣ್ಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ.155 ಎಕರೆಯಲ್ಲಿ 8 ಗ್ರಾಮಗಳು ಬರುತ್ತವೆ. ರೈಲ್ವೆ ಮಾರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಸದ್ಯಕ್ಕೆ ಸುಮಾರು 99 ಎಕರೆ ಜಿಎಂಸಿ ವರದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ಟೆಂಡರ್ ಕರೆಯಲಾಗುವುದು. ಡಿಸೆಂಬರ್ ಅಂತ್ಯದವರೆಗೆ ಶೇ. 80ರಷ್ಟು ಭೂಮಿ ಒದಗಿಸಲಾಗುವುದು.

ಮೊಹಮ್ಮದ್ ರೋಷನ್‌ ಜಿಲ್ಲಾಧಿಕಾರಿ