ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸ್ಪಷ್ಟ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಅಂಗೀಕರಿಸಬೇಕು ಎಂಬ ಕನ್ನಡಪರ ಸದಸ್ಯರ ಒತ್ತಾಯಕ್ಕೆ ಮಣ್ಣನೆ ಸಿಗದೇ ಹೋಗಿದ್ದು, ಪಾಲಿಕೆ ಸಾಮಾನ್ಯ ಸಭೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದು ಕನ್ನಡಪರ ಸಂಘಟನೆಗಳು ಮತ್ತು ಕನ್ನಡಿಗರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಬುಧವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಡಿ ವಿಚಾರ ಮತ್ತೆ ಪ್ರಮುಖ ಚರ್ಚೆಯ ವಿಷಯವಾಗಿ ಹೊರಹೊಮ್ಮಿತು. ಸಭೆ ಆರಂಭವಾಗುತ್ತಿದ್ದಂತೆಯೇ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ವಿಷಯ ಪ್ರಸ್ತಾಪಿಸಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಬೇಕು ಎಂದು ಮನವಿ ಮಾಡಿದರು. ಕನ್ನಡಪರ ಸಂಘಟನೆಗಳ ಆಶಯದಂತೆ ಪಾಲಿಕೆ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕನ್ನಡಪರ ಸದಸ್ಯರು, ಬೆಳಗಾವಿ ಕುರಿತು ಪದೇ ಪದೆ ಗೊಂದಲ ಸೃಷ್ಟಿಸಲು ಕೆಲ ಸಂಘಟನೆಗಳು ಪ್ರಯತ್ನಿಸುತ್ತಿದ್ದು, ಮಹಾನಗರ ಪಾಲಿಕೆ ಅಧಿಕೃತವಾಗಿ ತನ್ನ ನಿಲುವು ಪ್ರಕಟಿಸುವುದು ಅಗತ್ಯ. ರಾಜ್ಯ ಸರ್ಕಾರ, ಸುವರ್ಣ ವಿಧಾನಸೌಧ, ಹೈಕೋರ್ಟ್ ಪೀಠ ಸೇರಿದಂತೆ ಅನೇಕ ಆಡಳಿತಾತ್ಮಕ ವ್ಯವಸ್ಥೆಗಳು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಷಯದಲ್ಲಿ ಯಾವುದೇ ಅನುಮಾನವೇ ಇಲ್ಲ. ಹೀಗಾಗಿ ನಿರ್ಣಯ ಅಂಗೀಕರಿಸಿ ವಿವಾದ ಅಂತ್ಯಗೊಳಿಸಬೇಕೆಂದು ಆಗ್ರಹಿಸಿದರು.ಈ ಪ್ರಸ್ತಾವಕ್ಕೆ ಎಂಇಎಸ್ ಬೆಂಬಲಿತ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಈ ವಿಚಾರದಲ್ಲಿ ಪಾಲಿಕೆ ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ಅವರು ಪಟ್ಟು ಹಿಡಿದರು. ಇದರಿಂದ ಸಭೆಯಲ್ಲಿ ಕೆಲಕಾಲ ತೀವ್ರ ವಾಗ್ವಾದ ನಡೆಯಿತು. ಕನ್ನಡಪರ ಮತ್ತು ಎಂಇಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಕಾನೂನು ಸಲಹೆಗಾರರು, ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಅವಕಾಶ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ರಮೇಶ ಸೊಂಟಕ್ಕಿ ಹಾಗೂ ದಿನೇಶ ನಾಶಿಪುಡಿ, ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಅಷ್ಟೆ. ಇನ್ನೂ ಯಾವುದೇ ಮೊಕದ್ದಮೆ ದಾಖಲಾಗಿಲ್ಲ. ಹೀಗಾಗಿ, ಪಾಲಿಕೆಗೆ ನಿರ್ಣಯ ಕೈಗೊಳ್ಳಲು ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ವಾದಿಸಿದರು.
ಈ ವೇಳೆ ಮೇಯರ್ ಪ್ರೀತಿ ಕಾಮಕರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸದೆ, ಈ ವಿಷಯ ಸಭೆಯಲ್ಲಿ ಚರ್ಚೆಗೆ ಅವಕಾಶ ಇದೆಯೇ ಎಂಬುದರ ಕುರಿತು ನಗರಾಭಿವೃದ್ಧಿ ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗುವುದು ಎಂದು ರೂಲಿಂಗ್ ನೀಡಿದರು. ಬಳಿಕ, ಕರ್ನಾಟಕ ಪರ ನಿರ್ಣಯ ಕೈಗೊಳ್ಳಲು ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಮೇಯರ್ ಅವರ ಈ ನಿಲುವಿಗೆ ಕನ್ನಡಪರ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟವಾಗಿ ಹೇಳಲು ಹಿಂಜರಿದಿರುವುದು ಬೇಸರದ ಸಂಗತಿ ಎಂದು ಕೆಲ ಸದಸ್ಯರು ಆಕ್ಷೇಪಿಸಿದರು.ಬಿಗಿ ಪೊಲೀಸ್ ಬಂದೋಬಸ್ತ್
ಸಭೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಾನಗರ ಪಾಲಿಕೆ ಕಚೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಾಲಿಕೆ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.ಗಡಿ ವಿಚಾರ ಮತ್ತೆ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಬೆಳಗಾವಿಯ ರಾಜಕೀಯ ಮತ್ತು ಭಾಷಾ ವಾತಾವರಣಕ್ಕೆ ಹೊಸ ಚರ್ಚೆಗೆ ಕಾರಣವಾಗಿದೆ. ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಲು ವಿಫಲರಾದ ಮೇಯರ್ ಹಾಗೂ ಉಪ ಮೇಯರ್ ವಿರುದ್ಧ ರಾಜ್ಯವ್ಯಾಪಿ ಚಳವಳಿ ವಿಸ್ತರಿಸಲಾಗುವುದು. ಅಲ್ಲದೆ,ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಬೆಂಗಳೂರಿನ ಕನ್ನಡಪರ ಸಂಘಟನೆಗಳ ನಾಯಕರು ಭೇಟಿ ಮಾಡಿ, ಬೆಳಗಾವಿ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮುಖಂಡರ ಕರ್ನಾಟಕ ಹಾಗೂ ಕನ್ನಡ ವಿರೋಧಿ ನಿಲುವಿನ ಬಗ್ಗೆ ಗಮನಕ್ಕೆ ತರಲಾಗುವುದು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.
ಬಾಕ್ಸ್ಸಭೆಯಲ್ಲಿ ಆಡಳಿತ, ಪ್ರತಿಪಕ್ಷ ಮೌನ
ಬೆಳಗಾವಿ ಗಡಿ ವಿಚಾರದಂತಹ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯ ಸಭೆಯಲ್ಲಿ ಪ್ರಸ್ತಾಪವಾದರೂ, ಪಾಲಿಕೆಯ ಆಡಳಿತಾರೂಢ ಬಿಜೆಪಿ ಸದಸ್ಯರು ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಯಾರೂ ಕೂಡ ಕನ್ನಡಪರ ನಿರ್ಣಯದ ಪರವಾಗಿ ಸ್ಪಷ್ಟವಾಗಿ ಧ್ವನಿ ಎತ್ತದೇ ಮೌನಕ್ಕೆ ಶರಣಾದರು.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಅಂಗೀಕಾರದ ಕುರಿತ ಚರ್ಚೆ ತೀವ್ರ ಸ್ವರೂಪ ಪಡೆದಿತ್ತು. ಆದರೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ಸ್ಪಷ್ಟ ಬೆಂಬಲ ವ್ಯಕ್ತವಾಗಲಿಲ್ಲ. ಇದರಿಂದ ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡಪರ ಸದಸ್ಯರಲ್ಲಿ ಅಸಮಾಧಾನ ಮೂಡಿಸಿತು.
ನಾಮನಿರ್ದೇಶಿತ ಸದಸ್ಯರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ ಸೇರಿದಂತೆ ಕೆಲವರು ಮಾತ್ರ ಕನ್ನಡಪರ ನಿರ್ಣಯದ ಪರವಾಗಿ ಗಟ್ಟಿ ಧ್ವನಿ ಎತ್ತಿ, ಪಾಲಿಕೆ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಕನ್ನಡಪರ ವಿಚಾರ ಪ್ರಸ್ತಾಪಿಸಿ ಗಮನ ಸೆಳೆದವರು ಸಹ ನಾಮನಿರ್ದೇಶಿತ ಸದಸ್ಯರು ಎಂಬುದು ವಿಶೇಷ.ಹೊರಗೆ ಪ್ರತಿಭಟನೆ
ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ನಿರ್ಣಯ ಅಂಗೀಕಾರ ಕುರಿತು ಪಾಲಿಕೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ವಾಗ್ವಾದಕ್ಕೆ ಕಾರಣವಾದರೆ, ಅತ್ತ ಪಾಲಿಕೆ ಹೊರಗೆ ಕನ್ನಡಪರ ಸಂಘಟನೆಗಳು ಸ್ಪಷ್ಟ ನಿರ್ಣಯ ಅಂಗೀಕರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.------
ಕೋಟ್....ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಆಗ್ರಹಿಸಿ ಕಳೆದ ಮಾರ್ಚ್ 26ರಿಂದ ಕನ್ನಡ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಮೇಯರ್ ಹಾಗೂ ಉಪ ಮೇಯರ್ ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಕನ್ನಡಿಗರಿಗೆ ಹಾಗೂ ಕರ್ನಾಟಕಕ್ಕೆ ಬಗೆದ ದ್ರೋಹ. ಇದರ ಫಲವನ್ನು ಅವರು ಅನುಭವಿಸಬೇಕಾಗುತ್ತದೆ. ಶೀಘ್ರವೇ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳ ಸಭೆಗಳನ್ನು ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು.
ಅಶೋಕ ಚಂದರಗಿ, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ