ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ 2ನೇ ದಿನವಾದ ಬುಧವಾರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿತು.
ಕನ್ನಡಪ್ರಭ ವಾರ್ತೆ ಮಸ್ಕಿ (ರಾಯಚೂರು):
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ 2ನೇ ದಿನವಾದ ಬುಧವಾರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿತು.ಬುಧವಾರ ಬೆಳಗ್ಗೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಶ್ರೀಘನಮಟೇಶ್ವರ ಮಠದಿಂದ ಆರಂಭಗೊಂಡ ಎರಡನೇ ದಿನದ ಯಾತ್ರೆಗೆ ಅಮೋಘ ಜನಸ್ಪಂದನೆ ಸಿಕ್ಕಿತು. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾಜಿ ಸಚಿವ ಬಿ.ಶ್ರೀರಾಮುಲು, ಹಿರಿಯರಾದ ಸಿ.ಟಿ.ರವಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ, ಶಾಸಕರಾದ ಜನಾರ್ಧನ ರೆಡ್ಡಿ, ಮಾನಪ್ಪ ವಜ್ಜಲ್, ಡಾ.ಶಿವರಾಜ ಎಸ್.ಪಾಟೀಲ್, ಮಾಜಿ ಶಾಸಕ ರಾಜೂಗೌಡ, ಪ್ರತಾಪಗೌಡ ಪಾಟೀಲ್ ಸೇರಿದಂತೆ ಪಕ್ಷದ ಪ್ರಮುಖರು, ಸಾವಿರಾರು ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದರು.
ಸಂತೆಕೆಲ್ಲೂರಿನಿಂದ ಪ್ರಾರಂಭಗೊಂಡ ಯಾತ್ರೆ, ಮಧ್ಯಾಹ್ನದ ವೇಳೆಗೆ ಮುದಬಾಳ ಕ್ರಾಸ್ ಗೆ ಆಗಮಿಸಿತು. ಊಟದ ಬಳಿಕ ಪುನರಾರಂಭಗೊಂಡ ಯಾತ್ರೆ ಮಸ್ಕಿ ಪಟ್ಟಣ ಪ್ರವೇಶಿಸಿ ಅಲ್ಲಿಂದ ಗುಡದೂರಿಗೆ ಬಂದು ತಂಗಿತು. ಪಾದಯಾತ್ರೆ ಬುಧವಾರ ಸುಮಾರು 22 ಕಿ.ಮೀ. ಕ್ರಮಿಸಿತು.ಈ ಮಧ್ಯೆ, ಮಸ್ಕಿ ಕಡೆ ಸಾಗುತ್ತಿದ್ದ ಪಾದಯಾತ್ರೆ, ಅಂಕುಶದೊಡ್ಡಿ ಸಮೀಪಕ್ಕೆ ಬಂದಾಗ ವಿಜಯೇಂದ್ರ ಅವರು ರಸ್ತೆ ಪಕ್ಕದ ರೈತರ ಜಮೀನಿಗೆ ಭೇಟಿ ನೀಡಿ, ಹಾನಿಗೊಳಗಾದ ಸಜ್ಜೆ ಬೆಳೆಯನ್ನು ಪರಿಶೀಲಿಸಿದರು. ಬೆಳೆನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು.
ಬಳಿಕ, ಪಾದಯಾತ್ರೆ ಮಾರ್ಗದಲ್ಲಿ ದಲಿತ, ಕುರುಬ ಸಮುದಾಯದ ಹಲವು ಮುಖಂಡರೊಂದಿಗೆ ಮಾತುಕತೆ ನಡೆಸಿ, ಸಮುದಾಯದ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿದರು.ವಿಜಯೇಂದ್ರಗೆ ರಾಖಿಕಟ್ಟಿದ ಮಹಿಳಾ ಕಾರ್ಯಕರ್ತೆಯರು:
ಪಾದಯಾತ್ರೆಯ ಎರಡನೇ ದಿನ ಹಲವು ಆಸಕ್ತಿಕರ ಸಂಗತಿಗಳು ಘಟಿಸಿದವು. ಯಾತ್ರೆಯ ಆರಂಭದಲ್ಲಿ ಮಹಿಳೆಯರು, ಪಕ್ಷದ ಮಹಿಳಾ ಕಾರ್ಯಕರ್ತೆಯರು ವಿಜಯೇಂದ್ರ ಅವರಿಗೆ ರಾಖಿ ಕಟ್ಟಿ, ಆರತಿ ಮಾಡಿದರು. ಯಾತ್ರೆ ಸಾಗುತ್ತಿದ್ದ ಸಮಯದಲ್ಲಿ ಬಿ.ವೈ.ವಿಜಯೇಂದ್ರ, ಬಿ.ಶ್ರೀರಾಮುಲು, ರಾಜೂಗೌಡ ಅವರು ಡೋಲು ಕಲಾವಿದರಿಂದ ಡೋಲು ಪಡೆದು ಕೆಲ ಸಮಯ ಡೋಲು ಬಾರಿಸಿದರು. ಇದೇ ವೇಳೆ, ಕುರುಬ ಸಮುದಾಯದ ಮುಖಂಡರು ವಿಜಯೇಂದ್ರ ಅವರಿಗೆ ಕುರಿಯನ್ನು ಬಹುಮಾನವಾಗಿ ನೀಡಿದರು.ಮಧ್ಯಾಹ್ನದ ಊಟದ ಸಮಯದಲ್ಲಿ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಊಟ ಬಡಿಸಿದರು. ನಂತರ, ದಲಿತ ಸೇರಿ ಇತರ ಸಮುದಾಯಗಳ ಮುಖಂಡರೊಂದಿಗೆ ಕುಳಿತು ಊಟ ಮಾಡಿದರು.ಬರ ಪರಿಶೀಲನೆ ನಡೆಸಿದ ವಿಜಯೇಂದ್ರ:
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯ 2ನೇ ದಿನವಾದ ಬುಧವಾರ, ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬರ ಪರಿಶೀಲನೆ ನಡೆಸಿದರು.ಮಸ್ಕಿ ಕಡೆ ಸಾಗುತ್ತಿದ್ದ ಪಾದಯಾತ್ರೆ, ಅಂಕುಶದೊಡ್ಡಿ ಸಮೀಪಕ್ಕೆ ಬಂದಾಗ ವಿಜಯೇಂದ್ರ ಅವರು ರಸ್ತೆ ಪಕ್ಕದ ರೈತರ ಜಮೀನಿಗೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಸಜ್ಜೆ ಬೆಳೆಯನ್ನು ಪರಿಶೀಲಿಸಿದರು. ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ವಿಜಯೇಂದ್ರ, ರೈತರ ನೋವು ಹಾಗೂ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಖಂಡನೀಯ. ಇದನ್ನು ಖಂಡಿಸಿ ರೈತರ ಪರವಾಗಿಯೇ ಈ ಪಾದಯಾತ್ರೆಯನ್ನು ನಡೆಸುತ್ತಿದ್ದೇವೆ. ರೈತರ ಸಮಸ್ಯೆಯನ್ನು ಅಧಿಕಾರಸ್ಥರ ಗಮನಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದಲೇ ಜನಾಕ್ರೋಶ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.