ಸಾರಾಂಶ
ಬೆಳಗಾವಿ : ಬಾಣಂತಿಯರು ಹಾಗೂ ನವಜಾತ ಶಿಶುಗಳ ಸರಣಿ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬಿಮ್ಸ್ ಆಸ್ಪತ್ರೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ ನಾಯಕರು ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಬೆಳಗಾವಿ ಬಿಮ್ಸ್‌ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಬಾಣಂತಿಯರ ಸಾವು ಸಂಭವಿಸುತ್ತಿವೆ. ಡ್ರಗ್ಸ್ ಮಾಫಿಯಾ, ಕಳಪೆ ಔಷಧ ಪೂರೈಕೆ ಮಾಡಲಾಗುತ್ತಿದೆ. ಔಷಧಗಳ ಮೇಲೆ ನಾಟ್ ಫಾರ್ ಸೇಲ್ ಎಂದು ಮುದ್ರಿಸಿಲ್ಲ ಎಂದು ದೂರಿದರು.
ಬಳ್ಳಾರಿ ಘಟನೆ ಹೈಕೋರ್ಟ್ ನ್ಯಾಯಮೂರ್ತಿ ಸುಪರ್ದಿಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ಡ್ರಗ್ ಇನ್ಸ್‌ಪೆಕ್ಟರ್‌ಗಳೇ ಇಲ್ಲ. ಸದನದಲ್ಲಿ ನಿಲುವಳಿ ಸೂಚನೆ ತರುವ ತೀರ್ಮಾನ ಮಾಡಿದ್ದೇವೆ. ಜೆಡಿಎಸ್ ಮುಖಂಡರಾದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜೊತೆಗೂ ಮಾತುಕತೆ ಮಾಡಲಾಗಿದೆ ಎಂದ ಅವರು, ಆಸ್ಪತ್ರೆಗಳಲ್ಲಿನ ಬಾಣಂತಿಯರು, ಮಕ್ಕಳ ಸಾವಿನ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಿಲುವಳಿ ಸೂಚನೆ ಮಂಡಿಸುತ್ತೇವೆ. ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇವೆ. ಇಂತಹ ಘಟನೆ ಮರುಕಳಿಸಬಾರದು. ಬಾಣಂಯತಿಯರ ಮತ್ತು ಶಿಶುಗಳ ಸಾವಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಬಳ್ಳಾರಿ ಆಸ್ಪತ್ರೆಯಲ್ಲಿ ಒಬ್ಬ ಮಂತ್ರಿ ಕೂಡ ಹೋಗಿ ಭೇಟಿ ಮಾಡಿರಲಿಲ್ಲ. ನಾನು ಹೋಗಿ ಭೇಟಿ ಮಾಡಿದ ಎರಡು ದಿನಗಳ ನಂತರ ಆರೋಗ್ಯ ಸಚಿವರು ಭೇಟಿ ಮಾಡಿದ್ದಾರೆ. ಈಗ ಮೃತ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದು ನಾವು ಬೇಡಿಕೆ ಇಟ್ಟ ಮೇಲೆ ಈ ರೀತಿ ಪರಿಹಾರ ಘೋಷಣೆ ಮಾಡಿದ್ದಾರೆ. ಈಗಲೂ ರಾಜ್ಯದಲ್ಲಿ ಈ ರೀತಿಯ ಸಾವು ನಡೆಯುತ್ತಲೇ ಇವೆ ಎಂದು ದೂರಿದರು.
ಬಿಮ್ಸ್ ಆಸ್ಪತ್ರೆಗೆ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿ ಬಾಣಂತಿಯರಿಂದ ಆಸ್ಪತ್ರೆಯ ವ್ಯವಸ್ಥೆಯ ಕುರಿತು ಮಾಹಿತಿ ಕಲೆ ಹಾಕಿದರು. ಈ ವೇಳೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮತ್ತಿತರರು ಸಾಥ್ ನೀಡಿದ್ದರು.
ಇಡೀ ಜಿಲ್ಲೆಯಲ್ಲಿ ಸಾಕಷ್ಟು ತಾಯಂದಿರು ಸಾವಿಗೀಡಾಗಿದ್ದಾರೆ. ಅಪೌಷ್ಟಿಕತೆಯಿಂದ ಶಿಶುಗಳ ಸಾವಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಅಲ್ಲದೆ, ಪೋಷಣ್ ಅಭಿಯಾನವನ್ನು ಸರ್ಕಾರವೇ ಜಾರಿ ಮಾಡಿತ್ತು. ಆದರೂ ಸಾವಿಗೀಡಾಗಿರುವುದು ದುರಂತ. ಈಗಾಗಲೇ ಸಾವಿನ ಕುರಿತ ಮಾಹಿತಿಯನ್ನು ಬಿಮ್ಸ್ ಅವರಿಂದ ವರದಿ ತೆಗೆದುಕೊಂಡಿದ್ದೇವೆ. ಈ ವಿಚಾರವನ್ನು ಅಧಿವೇಶನದಲ್ಲಿ ದನಿ ಎತ್ತುತ್ತೇವೆ.
- ಶಶಿಕಲಾ ಜೊಲ್ಲೆ, ಮಾಜಿ ಸಚಿವೆ, ಶಾಸಕಿ