ಬಳ್ಳಾರಿ ಜೈಲು ಮತ್ತಷ್ಟು ಬಿಗಿ: ನಾಲ್ಕು ವಾಚ್ ಟವರ್‌ ನಿರ್ಮಾಣ

| Published : Jan 10 2025, 12:46 AM IST

ಸಾರಾಂಶ

ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ರಾಜ್ಯದ ಪ್ರಮುಖ ಜೈಲುಗಳಲ್ಲೊಂದಾದ ಬಳ್ಳಾರಿ ಕೇಂದ್ರ ಕಾರಾಗೃಹದ ಕೈದಿಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ಕಾರಾಗೃಹ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಜೈಲು ಸುತ್ತಲೂ 40 ಅಡಿ ಎತ್ತರದ 4 ವಾಚ್‌ ಟವರ್‌ಗಳನ್ನು ನಿರ್ಮಿಸಲು ಮುಂದಾಗಿದೆ.

ನಟೋರಿಯಸ್ ಕೈದಿಗಳು, ದೇಶದ್ರೋಹಿ ಆರೋಪದ ಗಂಭೀರ ಪ್ರಕರಣಗಳಲ್ಲಿರುವವರು ಸೇರಿದಂತೆ ಅನೇಕ ಕುಖ್ಯಾತ ರೌಡಿಗಳನ್ನಿರಿಸುವ ಬಳ್ಳಾರಿ ಜೈಲಿಗೆ ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಬೇಕು. ಜೈಲಿನ ನಿಯಮ ಉಲ್ಲಂಘನೆಯಾಗದಂತೆ ತೀವ್ರ ನಿಗಾ ಇಡಬೇಕು ಎಂಬ ಉದ್ದೇಶದಿಂದ ವಾಚ್‌ ಟವರ್ ನಿರ್ಮಾಣಕ್ಕೆ ಕಾರಾಗೃಹ ಇಲಾಖೆ ಮುಂದಾಗಿದೆ. ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.

ಜೈಲಿನ ಕೈದಿಗಳ ಮೇಲೆ ಸದಾ ಗಮನ ಇಡಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಸಿಬ್ಬಂದಿ ಪಾಳಿಯಂತೆ 24 ತಾಸುಗಳ ಕಾಲ ಕರ್ತವ್ಯ ನಿರ್ವಹಿಸಲಿದ್ದಾರೆ. ಭದ್ರತಾ ಸಿಬ್ಬಂದಿಗೆ ಬೈನಾಕ್ಯುಲರ್ ಗಳನ್ನು (ದುರ್ಬೀನು) ನೀಡಲಾಗುತ್ತಿದ್ದು, ಜೈಲಿನೊಳಗಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗಲಿದೆ.

ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ಜೈಲು ನಿರ್ವಹಣೆಗೆ ಗೃಹ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ವಾಚ್ ಟವರ್ ನಿರ್ಮಾಣವೂ ಒಂದಾಗಿದೆ.

ರಾಜ್ಯದ ನಾನಾ ಕೇಂದ್ರ ಕಾರಾಗೃಹಗಳಂತೆಯೇ ಈ ಹಿಂದೆ ಬಳ್ಳಾರಿ ಜೈಲಿನಲ್ಲೂ ಕೈದಿಗಳ ಗಾಂಜಾ, ಮೊಬೈಲ್ ಬಳಕೆ, ಅನೈತಿಕ ಚಟುವಟಿಕೆ, ಕೈದಿಗಳ ನಡುವೆ ಹೊಡೆದಾಟ, ಜೈಲ್‌ನಿಂದ ಪರಾರಿ ಪ್ರಕರಣಗಳು ನಡೆದಿದ್ದವು. ಕೈದಿಗಳಿಗೆ ತಲುಪುವಂತೆ ಜೈಲಿನ ತಡೆಗೋಡೆಯಿಂದ ಮೊಬೈಲ್, ಗಾಂಜಾ ಮತ್ತಿತರ ವಸ್ತುಗಳನ್ನು ಎಸೆಯಲಾಗುತ್ತಿತ್ತು. ಜೈಲು ದಾಳಿ ವೇಳೆ ಅನೇಕ ವಸ್ತುಗಳು ಸಿಕ್ಕು ಬಿದ್ದಿದ್ದವು. ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತಿರುವ ಕಾರಾಗೃಹ ಇಲಾಖೆ ಬಳ್ಳಾರಿ ಜೈಲು ಸುತ್ತ ವಾಚ್‌ ಟವರ್ ಗಳ ನಿರ್ಮಾಣದ ಮುತುವರ್ಜಿ ವಹಿಸಿದೆ.

ಪೊಲೀಸ್ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ ಇದರ ನಿರ್ಮಾಣದ ಹೊಣೆ ಹೊತ್ತಿದೆ. ನಾಲ್ಕು ತಿಂಗಳ ಬಳಿಕ ವಾಚ್ ಟವರ್ ಗಳ ಮೂಲಕ ಕೈದಿಗಳ ವಿಶೇಷ ನಿಗಾವಣಾ ಕಾರ್ಯ ಶುರುಗೊಳ್ಳಲಿದೆ.

ಜೈಲಿನ ಬಲ ಭಾಗದಲ್ಲಿ ಒಂದು, ದುರ್ಗಮ್ಮ ದೇವಸ್ಥಾನದ ದಿಕ್ಕಿನಲ್ಲಿ ಒಂದು ಹಾಗೂ ಜೈಲು ಮುಂಭಾಗದ ರಸ್ತೆಯಲ್ಲಿ ಎರಡು ಟವರ್‌ಗಳು ನಿರ್ಮಾಣಗೊಳ್ಳುತ್ತಿವೆ. ಕೇಂದ್ರ ಕೈಗಾರಿಕಾ ಭದ್ರತಾ ಸಿಬ್ಬಂದಿ ಪಾಳಿಯಂತೆ ವಾಚ್‌ ಟವರ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ, ಮಧ್ಯಾಹ್ನ ಓರ್ವರು ಹಾಗೂ ರಾತ್ರಿ ಪಾಳಿಯಲ್ಲಿ ಇಬ್ಬರು ಸಿಬ್ಬಂದಿ ಟವರ್‌ನಲ್ಲಿದ್ದು ಕೈದಿಗಳತ್ತ ನಿಗಾ ಇಡಲಿದ್ದಾರೆ.

ಬ್ರಿಟಿಷ್ ಕಾಲದ ಗಟ್ಟಿಮುಟ್ಟಾದ ಬಳ್ಳಾರಿ ಜೈಲಿನಲ್ಲಿ 447 ಕೈದಿಗಳನ್ನಿರಿಸುವ ಸಾಮರ್ಥ್ಯವಿದೆ. ವಿವಿಧ ಪ್ರಕರಣಗಳಲ್ಲಿ ಬಂಧಿಯಾಗಿರುವ ಆರೋಪಿತರು ಸೇರಿದಂತೆ ಸದ್ಯ ಒಟ್ಟು 361 ಕೈದಿಗಳಿದ್ದಾರೆ.

ಕೊಲೆ ಪ್ರಕರಣದ ಆರೋಪದಿಂದಾಗಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಜಾಮೀನು ಪಡೆದು ಇಲ್ಲಿನ ಕಾರಾಗೃಹದಿಂದ ಹೊರ ಬಿದ್ದ ಬೆನ್ನಲ್ಲೇ ಜೈಲು ಭದ್ರತೆ ಹೆಚ್ಚಿಸಲು ವಾಚ್‌ ಟವರ್‌ಗಳನ್ನು ನಿರ್ಮಾಣಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.ರಾಜ್ಯದ ವಿವಿಧ ಜೈಲುಗಳ ಸುತ್ತ ವಾಚ್ ಟವರ್ ಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಆದರೆ, ಬಳ್ಳಾರಿ ಜೈಲಿನ ಸುತ್ತ ಟವರ್ ಗಳು ಇರಲಿಲ್ಲ. ಇದೀಗ ಕಾರಾಗೃಹ ಇಲಾಖೆ ಟವರ್ ಗಳ ನಿರ್ಮಾಣಕ್ಕೆ ಮುಂದಾಗಿದೆ ಎನ್ನುತ್ತಾರೆ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಆರ್‌.ಲತಾ.