ಸಾರಾಂಶ
ಮಂಜುನಾಥ ಕೆ.
ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸಂಜೀವಿನಿ ಎಂದೇ ಹೆಸರಾದ ಬಳ್ಳಾರಿ ಮೆಡಿಕಲ್ ಕಾಲೇಜಿನ (ಬಿಮ್ಸ್) ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕೆಲವು ಪಿಜಿ ಕೋರ್ಸ್‌ಗಳ ಕಡಿತವಾಗುವ ಆತಂಕ ಎದುರಾಗಿದೆ.ಪ್ರಸಕ್ತ ಸಾಲಿನಲ್ಲಿ ಕೆಲ ವಿಭಾಗಗಳಲ್ಲಿ ನೂತನವಾಗಿ ಪಿಜಿ ಆರಂಭಕ್ಕೆ ಬಿಮ್ಸ್ ನಿರ್ಧರಿಸಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಅನುಮತಿ ಕಷ್ಟಸಾಧ್ಯ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ನವೆಂಬರ್ ತಿಂಗಳಲ್ಲಿ ಎಂಸಿಐ ತಂಡ ಬಳ್ಳಾರಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಲಿದ್ದು, ಪೂರಕ ಸಿಬ್ಬಂದಿ ಸಮಸ್ಯೆಯನ್ನಷ್ಟೇ ಇಟ್ಟುಕೊಂಡು ಎಂಬಿಬಿಎಸ್ ಹಾಗೂ ಪಿಜಿ ಕೋರ್ಸ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.701 ವಿದ್ಯಾರ್ಥಿಗಳ ವ್ಯಾಸಂಗ:
ಆರೋಗ್ಯ ಸೇವೆಯ ಜೊತೆಗೆ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಬಿಮ್ಸ್‌ನಲ್ಲಿ ಸದ್ಯ ಎಂಬಿಬಿಎಸ್‌ನಲ್ಲಿ 200 ಸೀಟ್, ಡೆಂಟಲ್ 63, ಬಿಎಸ್ಸಿ ನರ್ಸಿಂಗ್ 100, ಡಿಪ್ಲೋಮಾ ನರ್ಸಿಂಗ್ 30, ಪ್ಯಾರಾ ಮೆಡಿಕಲ್‌ನಲ್ಲಿ 200ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇದರೊಂದಿಗೆ ವಿವಿಧ ವಿಭಾಗಗಳಲ್ಲಿ ಪಿಜಿ ಕೋರ್ಸ್‌ಗೆ 109 ವಿದ್ಯಾರ್ಥಿಗಳು ಅಭ್ಯಾಸದಲ್ಲಿ ನಿರತರಾಗಿದ್ದಾರೆ.ಇದಕ್ಕಾಗಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಬೋಧಕ ಸಿಬ್ಬಂದಿಯನ್ನು ಸಹ ಸರ್ಕಾರದಿಂದ ನೇಮಿಸಲಾಗಿದೆ. ಆದರೆ, ಬಿಮ್ಸ್‌ನಲ್ಲಿ ಸರ್ಕಾರದಿಂದ ಮಂಜೂರಾದ ಹುದ್ದೆಗಳಿಗಿಂತ ಖಾಲಿಯಿರುವ ಹುದ್ದೆಗಳ ಭರ್ತಿಯನ್ನು ಎದುರು ನೋಡಲಾಗುತ್ತಿದೆ. ಇದರ ನಡುವೆಯೇ ಇರುವ ಸಿಬ್ಬಂದಿ ಮೂಲಕ ಪ್ರಸಕ್ತ ಸಾಲಿನಲ್ಲಿ ಕೆಲ ವಿಭಾಗಗಳಲ್ಲಿ ನೂತನ ಪಿಜಿ ಆರಂಭಕ್ಕೆ ಬಿಮ್ಸ್‌ನಿಂದ ನಿರ್ಧರಿಸಿದೆ.
ಬಿಮ್ಸ್‌ನಲ್ಲಿ ಇರುವ ಅನಾಟೊಮಿ, ಸೈಕೋಲೊಜಿ, ಬೈಯೋ ಕೆಮೆಸ್ಟ್ರಿ, ಫಾರ್ಮಕೊಲೊಜಿ, ಮೈಕ್ರೊ ಬೈಯೋಲಜಿ, ಫೊರೆನ್ಸಿಕ್ ಮೆಡಿಸಿನ್ ಸೇರಿ ಒಟ್ಟು 8 ವಿಭಾಗಗಳಲ್ಲಿ ಪ್ರಾಧ್ಯಾಪಕ ಹುದ್ದೆ 26 ಮಂಜೂರಾಗಿದ್ದು, ಇದರಲ್ಲಿ 22 ಭರ್ತಿಯಾಗಿವೆ. ಸಹ ಪ್ರಾಧ್ಯಾಪಕ 34 ಹುದ್ದೆಯಲ್ಲಿ 28 ಭರ್ತಿ, ಸಹಾಯಕ ಪ್ರಾಧ್ಯಾಪಕ ಹುದ್ದೆ 50ರಲ್ಲಿ 20 ಮಾತ್ರ ಭರ್ತಿಯಾಗಿವೆ. ಬೋಧಕ 31 ಹುದ್ದೆಗಳಲ್ಲಿ 10 ಭರ್ತಿಯಾಗಿವೆ.ಇದರ ಹೊರತಾಗಿ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಸ್ಕಿನ್, ಜನರಲ್ ಸರ್ಜರಿ, ಇಎನ್‌ಟಿ, ಯುರೋಲಾಜಿ, ರೇಡಿಯೋಲಾಜಿ, ಟಿಬಿ, ಪ್ಲಾಸ್ಟಿಕ್ ಸರ್ಜರಿ, ನೆಪ್ರೋಲಜಿ, ನ್ಯೂರೋಲಜಿ, ಬೈಯೋಫಿಸಿಕ್ಸ್ ಸೇರಿ 27 ವಿಭಾಗದಲ್ಲಿ 56 ಪ್ರಾಧ್ಯಾಪಕ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 41ಭರ್ತಿಯಾಗಿದ್ದು, 15 ಹುದ್ದೆ ಖಾಲಿಯಿವೆ. ಸಹ ಪ್ರಾಧ್ಯಾಪಕ 69 ಹುದ್ದೆಯಲ್ಲಿ 38 ಹುದ್ದೆ ಭರ್ತಿಯಾಗಿದ್ದು, 31ಖಾಲಿ, ಸಹಾಯಕ ಪ್ರಾಧ್ಯಾಪಕ ಹುದ್ದೆ 71ರಲ್ಲಿ 49 ಭರ್ತಿಯಾಗಿದ್ದು, 22 ಖಾಲಿಯಿವೆ.
ಸಿಬ್ಬಂದಿ ಕೊರತೆ:ಬಿಮ್ಸ್‌ನಲ್ಲಿ ವೈದ್ಯಕೀಯ ಬೋಧಕ ಹುದ್ದೆಗಳ ಕೊರತೆ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಭೇಟಿ ನೀಡುವ ಎಂಸಿಐ ಕೈಗೊಳ್ಳುವ ಕ್ರಮದ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿರುವ ಬಿಮ್ಸ್‌ನ ನಿರ್ದೇಶಕ ಡಾ.ಗಂಗಾಧರಗೌಡ, ಬಿಮ್ಸ್‌ನಲ್ಲಿ ಕೆಲ ವಿಭಾಗಗಳಲ್ಲಿ ಮಾತ್ರ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಎಂಸಿಐ ಭೇಟಿಯಿಂದ ಯಾವುದೇ ಸಮಸ್ಯೆಯಿಲ್ಲ. ಬಿಮ್ಸ್‌ನ ಒಟ್ಟಾರೆ ಸೌಲಭ್ಯ ಹಾಗೂ ಬೋಧಕ-ಬೋಧಕೇತರ ಹುದ್ದೆಗಳನ್ನು ಎಂಸಿಐ ತಂಡ ಪರಿಶೀಲನೆ ನಡೆಸಲಿದೆ. ಬಿಮ್ಸ್‌ನಲ್ಲಿರುವ ಕೆಲವು ವಿಭಾಗಗಳಲ್ಲಿ ನೂತನವಾಗಿ ಪಿಜಿ ಕೋರ್ಸ್ ಆರಂಭಕ್ಕೆ ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಎಂಸಿಐಗೆ ಕೋರಿಕೆ ಇಡಲಾಗುವುದು. ಆದರೆ, ಎಂಸಿಐ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.