ಬಳ್ಳಾರಿ ರಾಘವಗೆ ಆಧುನಿಕ ರಂಗಭೂಮಿ ಬಗ್ಗೆ ಸ್ಪಷ್ಟ ನಿಲುವುಗಳಿದ್ದವು: ಕಲ್ಮಠ

| Published : Jan 21 2025, 12:31 AM IST

ಸಾರಾಂಶ

ಮೂಢನಂಬಿಕೆ, ಅಸ್ಪೃಶ್ಯತೆ, ಸಮಾಜದ ನ್ಯೂನತೆಗಳನ್ನು ಹೋಗಲಾಡಿಸಲು ಪರಿಶ್ರಮಿಸಿದ ಮಹನೀಯರು.

ಬಳ್ಳಾರಿ: ರಂಗಭೂಮಿಯ ಅನರ್ಘ್ಯರತ್ನ ಎನಿಸಿದ್ದ ಬಳ್ಳಾರಿ ರಾಘವರು ನಾಟಕಗಳ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆ, ಅಸ್ಪೃಶ್ಯತೆ, ಸಮಾಜದ ನ್ಯೂನತೆಗಳನ್ನು ಹೋಗಲಾಡಿಸಲು ಪರಿಶ್ರಮಿಸಿದ ಮಹನೀಯರು. ಅವರಿಗೆ ಆಧುನಿಕ ರಂಗಭೂಮಿಯ ಬಗ್ಗೆ ಸ್ವಷ್ಟ ನಿಲುವುಗಳಿದ್ದವು ಎಂದು ಲೇಖಕ ಸಿದ್ದರಾಮ ಕಲ್ಮಠ ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ರಾಘವರು ಬಹುಮುಖಿ ನಟ, ನಿರ್ದೇಶಕ, ಬರಹಗಾರ, ವಕೀಲ ಮಾತ್ರವಲ್ಲದೆ ಅವರು ಸರ್ವಶ್ರೇಷ್ಠ ಮಾನವತಾವಾದಿಯಾಗಿದ್ದರು. ಅಂದಿನ ಕಾಲದ ಸಾಮಾಜಿಕ ಆತ್ಮಸಾಕ್ಷಿಯ ಪ್ರಜ್ಞೆಯಾಗಿದ್ದರು. ಪ್ರಖ್ಯಾತ ನಾಟಕಕಾರ ಜಾರ್ಜ್ ಬರ್ನಾಡ್ ಶಾ ಅವರನ್ನು ಭೇಟಿಯಾಗಿ ಪಾಶ್ಚಿಮಾತ್ಯ ರಂಗಭೂಮಿಯ ಬಗ್ಗೆ ಚರ್ಚೆ ನಡೆಸಿದ್ದರು. ಬರ್ನಾಡ್ ಶಾ ಅವರು ರಾಘವರ ಕುರಿತು ಮಾತನಾಡಿ, ಶೇಕ್ಸ್‌ಪೀಯರ್‌ ನಾಟಕಗಳನ್ನು ಬರೆದಿದ್ದಾರೆ. ಆದರೆ ಅದಕ್ಕೆ ತಕ್ಕ ಅಭಿನಯ ಚತುರತೆ ನಿಮ್ಮಲ್ಲಿದೆ ಎಂದು ಶ್ಲಾಘಿಸಿದ್ದರು. ರಾಘವರು ರಂಗಭೂಮಿ ನೀಡಿದ ಕೊಡುಗೆಯನ್ನು ಎಂದೂ ಮರೆಯಲಾಗದು ಎಂದರು.

ರಾಘವರು ವರ್ತಮಾನದ ವಸ್ತು ವಿಷಯಗಳ ನಾಟಕಗಳನ್ನು ತೆರೆಯ ಮೇಲೆ ತಂದರು.

ಕಲಾವಿದರಿಗೆ ಸೂಕ್ತ ರಂಗ ಶಿಕ್ಷಣದ ಅವಶ್ಯಕತೆ ಇದೆಯೆಂದೂ ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ಅಭಿನಯಿಸಬೇಕೆಂದು ಪ್ರತಿಪಾದಿಸುತ್ತಿದ್ದರು. ರಂಗಭೂಮಿ ಚಟುವಟಿಕೆಗಳಿಗೆ ದೇಶ ವಿದೇಶಗಳನ್ನು ಪರ್ಯಟನೆ ಮಾಡುತ್ತಿದ್ದ ಅವರು, ಅನೇಕ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದರು. ವಿವಿಧ ಭಾಷೆಗಳ 60 ನಾಟಕಗಳಲ್ಲಿ ಅಭಿನಯಿಸಿದ್ದರು. ಸಾರಂಗಧರ, ಕಬೀರ, ಹಿರಣ್ಯಕಶ್ಯಪು, ಶಿವಾಜಿ, ಚಾಣಕ್ಯ, ಹರಿಶ್ಚಂದ್ರ, ಕರ್ಣ, ಹ್ಯಾಮ್ಲೆಟ್, ಮ್ಯಾಕ್ ಬೆತ್ ಹೀಗೆ ವಿಭಿನ್ನ ಪಾತ್ರಗಳನ್ನು ಅಭಿನಯಿಸಿ ವಿಶ್ವ ರಂಗಭೂಮಿಗೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಉದ್ಘಾಟಿಸಿ ಮಾತನಾಡಿದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚೆನ್ನಪ್ಪ ಕನ್ನಡ ಮತ್ತು ತೆಲುಗು ನಾಟಕ ರಂಗಕ್ಕೆ ರಾಘವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಕಾಲೇಜಿನ ಪ್ರಾಚಾರ್ಯ ಪಿ.ನಾಗೇಶ್ವರರಾವ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಪ್ರಕಾಶ್, ನಿವೃತ್ತ ಉಪನ್ಯಾಸಕ ಎನ್.ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಹಿರಿಯ ಪತ್ರಕರ್ತ ಪ್ರಭಾಕರ, ಕೆ.ಸುಂಕಪ್ಪ, ಶಿವೇಶ್ವರಗೌಡ ಕಲ್ಲುಕಂಬ, ತೆಂಗಿನಕಾಯಿ ಮಲ್ಲಿಕಾರ್ಜುನ, ಬಿ.ರಮಣಪ್ಪ, ಟಿ.ತಿಮ್ಮಪ್ಪ, ಬಿ.ಹನುಮಂತ ರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ಕಸಾಪ ಅಧ್ಯಕ್ಷ ನಾಗರೆಡ್ಡಿ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ನಿರೂಪಿಸಿದರು.