ರಂಗಭೂಮಿಗೆ ಜೀವಕಳೆ ತಂದ ಬಳ್ಳಾರಿ ರಾಘವ

| Published : Apr 27 2025, 01:47 AM IST

ಸಾರಾಂಶ

ಬಳ್ಳಾರಿ ರಾಘವ ಕಲಾ ಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ವಿಶ್ವ ರಂಗಕರ್ಮಿ ಬಳ್ಳಾರಿ ರಾಘವರ 79ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ನಿವೃತ್ತ ಉಪನ್ಯಾಸಕ ಎನ್. ಬಸವರಾಜ್ ಅವರು ವಿಶೇಷ ಉಪನ್ಯಾಸ ನೀಡಿದರು.

ಬಳ್ಳಾರಿ: ಇಲ್ಲಿನ ರಾಘವ ಕಲಾ ಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ವಿಶ್ವ ರಂಗಕರ್ಮಿ ಬಳ್ಳಾರಿ ರಾಘವರ 79ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ರಾಘವರ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಎನ್. ಬಸವರಾಜ್, ಭಾರತ ಕಂಡ ಅದ್ವಿತೀಯ ನಾಟಕಕಾರಲ್ಲಿ ಬಳ್ಳಾರಿ ರಾಘವರೂ ಒಬ್ಬರು. ಆಂಧ್ರಪ್ರದೇಶದ ತಾಡಪತ್ರಿಯಲ್ಲಿ ಜನಿಸಿದ ಅವರು ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ಅವರ ಸೋದರ ಮಾವ ಧರ್ಮಾವರಂ ರಾಮಕೃಷ್ಣಾಚಾರ್ಯರು ಆಂಧ್ರನಾಟಕ ಪಿತಾಮಹ ಎಂಬ ಬಿರುದು ಹೊಂದಿದ್ದರು. ಸೋದರ ಮಾವನವರ ಗರಡಿಯಲ್ಲಿ ಬೆಳೆದ ರಾಘವರು ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಆದರೆ, ರಾಘವರು ಹೆಚ್ಚು ರಂಗಭೂಮಿ ಕಲೆಯಿಂದಾಗಿಯೇ ಪರಿಚಿತವಾಗಿದ್ದರು. ರಂಗಕಲೆಯ ಮೇಲೆ ರಾಘವರಿಗಿದ್ದ ಅಪಾರ ಪ್ರೀತಿ ಅವರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಯಿತು. ಒಮ್ಮೆ ಬೆಂಗಳೂರಿನಲ್ಲಿ ಜರುಗಿದ ಕಬೀರ ನಾಟಕವನ್ನು ವೀಕ್ಷಿಸಲು ಮಹಾತ್ಮ ಗಾಂಧೀಜಿ ಬಂದಿದ್ದರು. ನಾಟಕ ಮುಗಿದ ಬಳಿಕ ನೇರವಾಗಿ ರಾಘವರನ್ನು ಭೇಟಿ ಮಾಡಿದ ಗಾಂಧೀಜಿ ಅವರ ರಾಘವರ ಅಭಿನಯವನ್ನು ಪ್ರಶಂಸಿಸಿದ್ದರು. ತಂಡ ಕಟ್ಟಿಕೊಂಡು ದೇಶದಾದ್ಯಂತ ಸಂಚರಿಸಿದ ರಾಘವರು, ಕನ್ನಡ, ತೆಲುಗು, ಇಂಗ್ಲಿಷ್ ನಾಟಕಗಳನ್ನು ಪ್ರದರ್ಶಿಸಿ, ರಂಗಭೂಮಿಗೆ ಜೀವ ಕಳೆ ತಂದರು ಎಂದು ಸ್ಮರಿಸಿದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪ, ಅಧ್ಯಕ್ಷ ಕೆ. ಕೋಟೇಶ್ವರರಾವ್, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಎಚ್. ವಿಷ್ಣುವರ್ಧನ್ ರೆಡ್ಡಿ, ಖಜಾಂಚಿ ಪಿ. ಧನಂಜಯ, ಜಂಟಿ ಕಾರ್ಯದರ್ಶಿ ಎಂ. ರಾಮಾಂಜನೇಯಲು, ಚೆಲ್ಲಾ ಅಮರೇಂದ್ರ ನಾಥ ಚೌಧರಿ, ಕೆ. ಶ್ಯಾಮಸುಂದರ, ಜಿ.ಆರ್. ವೆಂಕಟೇಶಲು, ಪ್ರಭಾಕರ, ಕೆ. ಪೊಂಪನಗೌಡ, ಎನ್. ಯಶವಂತ ರಾಜು, ರಾಮಬ್ರಹ್ಮ, ಕೃಷ್ಣ, ಶೇಷರೆಡ್ಡಿ, ರಮಣಪ್ಪ ಭಜಂತ್ರಿ ಮತ್ತಿತರರು ಭಾಗವಹಿಸಿದ್ದರು.

ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಎನ್. ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಮಯೂರ ಕಲಾ ಸಂಘದಿಂದ ಮದನ್ ಮೋಹನ್ ನಿರ್ದೇಶನದಲ್ಲಿ ನಿರಂತರ ಜೀವನ ಪಯಣ ಕನ್ನಡ ನಾಟಕ ಪ್ರದರ್ಶನಗೊಂಡಿತು.