ಸಾರಾಂಶ
ಬಿಎಸ್ಸಿ ದ್ವಿತೀಯ ಸೆಮ್‌ನ ಕನ್ನಡ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ವಾಣಿಜ್ಯ ವಿಷಯದ ಪ್ರಶ್ನೆಗಳು ಮುದ್ರಣಗೊಂಡು ಗೊಂದಲಕ್ಕೀಡಾದ ಪ್ರಸಂಗ ನಗರದಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದಿದೆ.
ಜೆರಾಕ್ಸ್ ಪ್ರಶ್ನೆಪತ್ರಿಕೆಗಳನ್ನು ನೀಡಿ ಪರೀಕ್ಷೆ ಬರೆಸಿದ ಪರೀಕ್ಷಾ ಕೇಂದ್ರಗಳು
ಪ್ಯಾಕ್ ಮಾಡುವಾಗ ಆದ ಸಮಸ್ಯೆ; ಮುಂಜಾಗ್ರತೆ ವಹಿಸದ ವಿವಿವಿದ್ಯಾರ್ಥಿಗಳು ಕಂಗಾಲು; ತಡವಾಗಿ ಶುರುಗೊಂಡ ಪರೀಕ್ಷೆ ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಿಎಸ್ಸಿ ದ್ವಿತೀಯ ಸೆಮ್‌ನ ಕನ್ನಡ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ವಾಣಿಜ್ಯ ವಿಷಯದ ಪ್ರಶ್ನೆಗಳು ಮುದ್ರಣಗೊಂಡು ಗೊಂದಲಕ್ಕೀಡಾದ ಪ್ರಸಂಗ ನಗರದಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದಿದೆ.ಕೂಡಲೇ ಎಚ್ಚೆತ್ತ ಪರೀಕ್ಷಾರ್ಥಿಗಳು ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತರುತ್ತಿದ್ದಂತೆಯೇ ವಿಶ್ವವಿದ್ಯಾಲಯದಿಂದ ಮತ್ತೊಂದು ನಿಗದಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ತರಿಸಿಕೊಂಡು ಪರೀಕ್ಷೆ ನಡೆಸಲಾಗಿದೆ.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವ್ಯಾಪ್ತಿಯಲ್ಲಿ ಪದವಿ ಪರೀಕ್ಷೆಗಳು ಶುರುವಾಗಿದ್ದು, ಮಂಗಳವಾರ ಬೇಸಿಕ್ ಕನ್ನಡ ಪರೀಕ್ಷೆ ನಡೆಯಿತು. ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಸಮಯ ಶುರುವಾಗುತ್ತಿದ್ದಂತೆಯೇ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಪ್ರಶ್ನೆಪತ್ರಿಕೆ ನೀಡಿದ್ದಾರೆ. ಪ್ರಶ್ನೆಗಳನ್ನು ಓದುತ್ತಿದ್ದಂತೆಯೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಪ್ರಶ್ನೆ ಪತ್ರಿಕೆ ಬದಲಾಗಿದ್ದು, ಕನ್ನಡ ಬದಲಿಗೆ ವಾಣಿಜ್ಯ ಶಾಸ್ತ್ರದ ಪರೀಕ್ಷೆ ಪತ್ರಿಕೆ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸುತ್ತಿದ್ದಂತೆಯೇ ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ, ಇ-ಮೇಲ್ ಮೂಲಕ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಪ್ರಶ್ನೆಪತ್ರಿಕೆ ಕಳಿಸಿಕೊಟ್ಟಿದ್ದು, ಪ್ರಶ್ನೆಪತ್ರಿಕೆ ಜೆರಾಕ್ಸ್ ಪ್ರತಿ ನೀಡಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಲಾಗಿದೆ.ಜಿಲ್ಲೆಯ ವಿಎಸ್‌ಕೆವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕಳೆದ ಮೂರು ದಿನಗಳಿಂದ ೨, ೪, ೬ಸೆಮಿಸ್ಟರ್‌ಗಳ ಬಿಸಿಎ, ಬಿಕಾಂ, ಬಿಬಿಎ, ಬಿಎ, ಬಿಕಾಂ, ಬಿಸ್ಸಿ ಸೇರಿದಂತೆ ಪದವಿಯ ಕೋರ್ಸ್‌ಗಳ ಪರೀಕ್ಷೆ ಆರಂಭವಾಗಿವೆ. ಮಂಗಳವಾರ ಬಿಎಸ್ಸಿಯ ಬೇಸಿಕ್ ಕನ್ನಡ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದ ಪ್ರಶ್ನೆ ಪತ್ರಿಕೆ ಬಂದಿದ್ದು ವಿದ್ಯಾರ್ಥಿಗಳು ಕೆಲಕಾಲ ಆತಂಕಗೊಂಡಿದ್ದಾರೆ. ಪ್ರಶ್ನೆಪತ್ರಿಕೆ ಗೊಂದಲದಿಂದಾಗಿ ಬೆಳಿಗ್ಗೆ 9 ಗಂಟೆಗೆ ಶುರುಗೊಳ್ಳಬೇಕಿದ್ದ ಪರೀಕ್ಷೆ 45 ನಿಮಿಷಗಳ ಕಾಲ ತಡವಾಗಿ ಶುರುವಾಗಿದೆ.
ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ.ಸಾಲಿ, ಪ್ರಶ್ನೆಪತ್ರಿಕೆ ಬದಲಾವಣೆಯಾಗಿಲ್ಲ. ವಿವಿಯಿಂದ ಪರೀಕ್ಷಾ ಕೇಂದ್ರಗಳಿಗೆ ಕಳಿಸುವಾಗ ಬೇರೆಯದ್ದೇ ಪ್ರಶ್ನೆಪತ್ರಿಕೆ ಕಳಿಸಲಾಗಿದ್ದು, ಕೂಡಲೇ ಅದನ್ನು ಸರಿಪಡಿಸಲಾಗಿದೆ. ಪ್ಯಾಕ್ ಮಾಡುವಾಗ ಬಿಎಸ್ಸಿ ಬದಲಾಗಿ, ಬಿಕಾಂ ಪ್ರಶ್ನೆಪತ್ರಿಕೆ ಕಳಿಸಲಾಗಿದೆ. ನಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಬಿಎಸ್ಸಿ ಪ್ರಶ್ನೆ ಪತ್ರಿಕೆಯನ್ನು ಇ-ಮೇಲ್ ಮೂಲಕ ಕಳಿಸಿದೆವು. ಪ್ರಶ್ನೆಪತ್ರಿಕೆ ಜೆರಾಕ್ಸ್ ಮಾಡಿಸಿ, ಪರೀಕ್ಷೆ ಬರೆಸಲಾಗಿದೆ ಎಂದು ತಿಳಿಸಿದರು.