ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಪುರಸಭೆಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಲಕ್ಷ್ಮಮ್ಮ ಮಹೇಶ್ ಮತ್ತು ಉಪಾಧ್ಯಕ್ಷರಾಗಿ ಮಹಮ್ಮದ್ ಯಾಸೀನ್ ಅವಿರೋಧವಾಗಿ ಆಯ್ಕೆಯಾದರು.
13 ಮಂದಿ ಸದಸ್ಯ ಬಲ ಹೊಂದಿರುವ ಬೆಳ್ಳೂರು ಪಪಂನಲ್ಲಿ ಕಾಂಗ್ರೆಸ್ ನ 7 ಮಂದಿ, ಜೆಡಿಎಸ್‌ನ 4 ಮಂದಿ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದರು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬೆಳ್ಳೂರಿನ 7ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಲಕ್ಷ್ಮಮ್ಮ ಮಹೇಶ್ ಹಾಗೂ ಬಿಸಿಎಂ ಎ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಮಹಮ್ಮದ್ ಯಾಸೀನ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಜಿ.ಆದರ್ಶ್ ಪ್ರಕಟಿಸಿದರು.ಸ್ಪಷ್ಪ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಕೈ ಪಕ್ಷದ ಪಾಲಾಗುವ ಮುನ್ಸೂಚನೆಯಿಂದ ಮತದಾನದ ಹಕ್ಕು ಹೊಂದಿರುವ ಸ್ಥಳೀಯ ಶಾಸಕರೂ ಆಗಿರುವ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.
ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು, ಜೆಡಿಎಸ್ ಪಕ್ಷದ ಇಬ್ಬರು, ಇಬ್ಬರು ಪಕ್ಷೇತರ ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು. ಜೆಡಿಎಸ್‌ನ ಇಬ್ಬರು ಸದಸ್ಯರು ಗೈರಾಗಿದ್ದರು.ಎರಡನೇ ಬಾರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಲಕ್ಷ್ಮಮ್ಮ ಮಹೇಶ್ ಮಾತನಾಡಿ, ಎರಡನೇ ಬಾರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಬಹಳ ಸಂತಸ ತಂದಿದೆ. ಬೆಳ್ಳೂರು ಪಪಂ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಜೊತೆಗೆ, ಸ್ಥಳೀಯ ಶಾಸಕ ಎನ್.ಚಲುವರಾಯಸ್ವಾಮಿ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ವಿಶೇಷ ಅನುದಾನ ಪಡೆದು ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಬೆಳ್ಳೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಾಗುವುದು ಎಂದರು.
ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಪಪಂ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪಟಾಕಿ ಸಿಡಿಸಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷದೊಂದಿಗೆ ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ತಟ್ಟಹಳ್ಳಿ ನರಸಿಂಹಮೂರ್ತಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ತಾಪಂ ಮಾಜಿ ಸದಸ್ಯ ವೆಂಕಟೇಶ್, ಪಪಂ ಸದಸ್ಯರಾದ ನಿತಿನ್‌ಜೈನ್, ಮಂಜುನಾಥ್(ಲ್ಯಾಬ್‌ಮಂಜು) ಆಕಾಶ್, ಹೊಂಗೆರೇಗೌಡ, ಜಯಪಾಲ್, ರೂಹಿಜಿನತ್, ಮೆಹತಾಬ್, ಯಶೋಧಮ್ಮ, ಪಿಎಸಿಎಸ್ ನಿರ್ದೇಶಕ ಬಿ.ಜಿ.ರವಿ, ಮುಖಂಡರಾದ ಪದ್ಮನಾಭ (ಪಾಪಣ್ಣ) ಬೆಳ್ಳೂರು ಶಿವಣ್ಣ, ಬಿ.ಆರ್.ವಿಜಯಕುಮಾರ್, ನರೇಶ್, ಸಮರ್ಥ್, ಪುಟ್ಟಸ್ವಾಮಿ, ಸರ್ದಾರ್, ಮುನೀರ್, ಮುಖ್ಯಾಧಿಕಾರಿ ಡಿ.ಲಕ್ಷ್ಮಣ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.