ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಾಹಿತ್ಯ ಜನರ ಧ್ವನಿಯಾಗಬೇಕು, ಅದು ವರ್ತಮಾನದ ಪ್ರತಿಬಿಂಬವಾದಾಗ ಅದಕ್ಕೆ ಮಹತ್ವವಿರುತ್ತದೆ ಎಂದು ಸುಳ್ಯ ನೆಹರು ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ವತಿಯಿಂದ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಭಾನುವಾರ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸುವರ್ಣ ಕರ್ನಾಟಕ ಭಾಷೆ - ಸಾಹಿತ್ಯ- ಸಂಸ್ಕೃತಿ ಆಶಯದಲ್ಲಿ ನಡೆದ ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.ಬೆಳ್ತಂಗಡಿ ತಾಲೂಕು ಶೈಕ್ಷಣಿಕವಾಗಿ, ಸಾಹಿತ್ಯವಾಗಿ ಹಳೆ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದ ವರೆಗೆ ಬಹಳಷ್ಟು ಕೊಡುಗೆ ನೀಡಿದೆ. ಸಾಹಿತ್ಯದ ವಿಚಾರವನ್ನು ಮತ್ತೆ ಸಮಕಾಲೀನತೆಗೆ ಹೊಂದಿಸುವ ಕೆಲಸವಾಗಬೇಕು. ಇಂದು ಸಾಹಿತ್ಯವನ್ನು ಓದುವ ಸಂಸ್ಕೃತಿ ಹಿಂದಕ್ಕೆ ಉಳಿದು ಸೋತಿದೆ. ಕೇಳು ಸಂಸ್ಕೃತಿ ವಿರಾಜಮಾನವಾಗಿದೆ. ಬೇರೆ ಬೇರೆ ಸಾಮಾಜಿಕ ನವ ಮಾಧ್ಯಮಗಳು ನಮ್ಮನ್ನು ಸಂಬಂಧದಿಂದ ವಿಘಟನೆಗೊಳಿಸಿದೆ. ಕೃತಕ ಬೌದ್ಧಿಕತೆಯು ಅನುಕೂಲಕ್ಕಿಂತ ಅನಾಹುತ ಮಾಡಬಹುದು. ವೈಜ್ಞಾನಿಕತೆಯು 2030ಕ್ಕೆ ಯುವಸಮೂಹ ಶೇ.30 ಉದ್ಯೋಗವಕಾಶವನ್ನು ಕಸಿದುಕೊಳ್ಳಲಿದೆ ಎಂದು ಎಚ್ಚರಿಸಿದರು.*ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಸಾಹಿತ್ಯ: ಡಾ.ಕೆ.ಎಂ.ಶೆಟ್ಟಿ ಬಳ್ಳಮಂಜ, ದೇಶಸೇವೆ: ಗೋಪಾಲಕೃಷ್ಣ ಭಟ್ ಕಾಂಚೋಡು, ನಾಟಿ ವೈದ್ಯೆ: ಬೇಬಿ ಪೂಜಾರಿ, ಶಿಕ್ಷಣ: ಡಾ.ಎನ್.ಎಂ.ಜೋಸೆಫ್, ಜನಪದ ವಸ್ತು ಸಂಗ್ರಾಹಕ: ಹೈದರಾಲಿ ಹಳ್ಳಿಮನೆ ಅವರನ್ನು ಸಮ್ಮಾನಿಸಲಾಯಿತು.ಸಮ್ಮೇಳನ ಅಧ್ಯಕ್ಷ ಪ್ರೊ.ಎ.ಕೃಷ್ಣಪ್ಪ ಪೂಜಾರಿ ಅವರು ಸಂಯೋಜನಾ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಸಮಾರೋಪ ನುಡಿಗಳನ್ನಾಡಿ, ಒಬ್ಬ ಮನುಷ್ಯ ಸಾಧನೆ ಮಾಡದೆ ಸತ್ತರೆ ಅದು ಆತನ ಬದುಕಿಗೆ ಅವಮಾನ. ಸಾಧನೆ ಮತ್ತು ಆದರ್ಶ ಬದುಕಿನ ಎರಡು ತತ್ವಗಳಾಗಿವೆ. ತಾಲೂಕು ಮಟ್ಟದ ಸಮ್ಮೇಳನಕ್ಕೆ ಆದ ಸಿದ್ಧತೆ, ಪ್ರಚಾರ ಜಿಲ್ಲಾ ಸಮ್ಮೇಳನಕ್ಕೆ ಮೇಲ್ಪಟ್ಟು ವೈಭವದಲ್ಲಿ ನಡೆಸಿಕೊಟ್ಡಿದ್ದೀರಿ ಎಂದು ಎಲ್ಲರ ಸಹಕಾರವನ್ನು ಸ್ಮರಿಸಿದರು.ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿ, 18ನೇ ಸಾಹಿತ್ಯ ಸಮ್ಮೇಳನದ ಮೂಲಕ ಯುವ ಪ್ರತಿಭಾ ವೇದಿಕೆಯಾಗಿ ಹೊರಹೊಮ್ಮಿದೆ. ಇಷ್ಟೊಂದು ಸುಂದರ ಕಾರ್ಯಕ್ರಮ ನೆರವೇರಿಸಿಕೊಟ್ಟ ಕಸಾಪ ತಾಲೂಕು ಘಟಕವನ್ನು ಅಭಿನಂದಿಸಿದ ಅವರು ಮುಂದಿನ ಮಾರ್ಚ್‌ನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನೆರವೇರಲಿದೆ ಎಂದು ಘೋಷಿಸಿದರು.ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಎಚ್.ಪದ್ಮ ಗೌಡ, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಶುಭಹಾರೈಸಿದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ, ಸಮ್ಮೇಳನ ಸಂಯೋಜನಾ ಸಮಿತಿಯ ಅಧ್ಯಕ್ಷ ಜಯಾನಂದ ಗೌಡ ಅವರನ್ನು ಸಮ್ಮಾನಿಸಲಾಯಿತು.ವೇದಿಕೆಯಲ್ಲಿ ಸಮ್ಮೇಳನ ಸಂಯೋಜನಾ ಸಮಿತಿಯ ಅಧ್ಯಕ್ಷ ಜಯಾನಂದ ಗೌಡ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಸದಸ್ಯ ಡಾ.ಎಂ.ಕೆ.ಮಾಧವ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ರಾಜೇಶ್ವರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಗೌರವ ಕಾರ್ಯದರ್ಶಿ ಪ್ರಮೀಳಾ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಮಂಗಳೂರು ಘಟಕದ ಮಂಜುನಾಥ್ ಎಸ್.ರೇವಣ್ಕರ್, ಕೋಶಾಧಿಕಾರಿ ಮೀನಾಕ್ಷಿ ಎನ್. ಗುರುವಾಯನಕೆರೆ ಉಪಸ್ಥಿತರಿದ್ದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿದರು. ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು ವಂದಿಸಿದರು. ಸಂಯೋಜನಾ ಸಮಿತಿ ಕಾರ್ಯದರ್ಶಿ ವಿಷ್ಣು ಪ್ರಕಾಶ ಎಂ. ನಿರೂಪಿಸಿದರು.ಸಮಾರೋಪದ ಬಳಿಕ ಕಲಾಮಯಂ ಉಡುಪಿ ಅವರಿಂದ ಜಾನಪದ ವೈಭವ ಅತ್ಯಂತ ಆಕರ್ಷಮಯವಾಗಿ ನೆರವೇರಿತು.