ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಭವ್ಯ ರಾಮಮಂದಿರದ ನಿರ್ಮಾಣಕ್ಕಾಗಿ ದೇಶ ಹಾತೊರೆಯುತ್ತಿದ್ದರೂ ಅನೇಕ ಜನ ಮಂದಿರ ನಿರ್ಮಾಣ ಕನಸಿನ ಮಾತು ಎನ್ನುತ್ತಿದ್ದ ಕಾಲಘಟ್ಟದಲ್ಲಿ ಸೋಮಶೇಖರ ಅವರ ಮನೆಯಲ್ಲೊಂದು(2003 ರಲ್ಲೇ) ರಾಮಮಂದಿರ ನಿರ್ಮಾಣಗೊಂಡಿದೆ.
ಸುಮಾರು ಐದುನೂರು ವರ್ಷಗಳಿಂದ ರಾಮ ಜನ್ಮಭೂಮಿಯ ಮುಕ್ತಿಗಾಗಿ ನಡೆಯುತ್ತಿದ್ದ ಹೋರಾಟ ತೀವ್ರಗೊಂಡು 1990ರಲ್ಲಿ ಮೊದಲ ಕರಸೇವೆ ನಡೆಯಿತು. 1992ರಲ್ಲಿ ನಡೆದ ಎರಡನೆ ಕರಸೇವೆಯಲ್ಲಿ ಜನ್ಮಭೂಮಿಯಲ್ಲಿದ್ದ ಕಟ್ಟಡ ಧರಾಶಾಯಿಯಾಯಿತು. ಮೊದಲ ಕರಸೇವೆಯಲ್ಲಿ ಗುರುವಾಯನಕೆರೆಯ ಸೋಮಶೇಖರ ದೇವಸ್ಯ ಅವರು ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ಆದರೆ ಎರಡನೆಯ ಕರಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂಬ ನೋವು ಅವರನ್ನು ಈಗಲೂ ಕಾಡುತ್ತಿದೆ.ಕಟ್ಟಡ ನೆಲಸಮವಾದ ಕೂಡಲೆ ರಾಮನಿಗಾಗಿ ಪುಟ್ಟಗುಡಿಯೊಂದು ಅಷ್ಟೇ ವೇಗವಾಗಿ ನಿರ್ಮಾಣಗೊಂಡು ಅಚ್ಚರಿ ಮೂಡಿಸಿದೆ. ಸೋಮಶೇಖರ ಅವರ ಮನೆಯಲ್ಲೊಂದು (2003 ರಲ್ಲೇ) ರಾಮಮಂದಿರ ಪೂರ್ಣಗೊಂಡಿದೆ. ನಿರ್ಮಾಣಗೊಂಡಿತು!! ಎಂದರೆ ಅಚ್ಚರಿಯಾದೀತು.2003 ರ ಸಂದರ್ಭ ಇಂಟರ್ನೆಟ್ ನಂತಹ ಸಾಮಾಜಿಕ ಜಾಲತಾಣಗಳ ವ್ಯವಸ್ಥೆಗಳು ಇರಲಿಲ್ಲ. ಆ ಸಂದರ್ಭದಲ್ಲಿ ಸೋಮಶೇಖರ ಅವರ ಅಕ್ಕನ ಮಗ ಗುರುಪ್ರಸಾದ್ ಉಜಿರೆಯ SDM ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಆಗ ಆತನಿಗೆ ವಿಶ್ವಹಿಂದು ಪರಿಷತ್ ನ ಹೆಸರಲ್ಲಿ ಮುದ್ರಣಗೊಂಡಿದ್ದ ಮಂದಿರದ ಮಾದರಿ ಚಿತ್ರವೊಂದು ಕೈಗೆ ಸಿಕ್ಕಿತ್ತು. ಅದನ್ನು ನೋಡಿ ಆತನಿಗೆ ಏನು ಅನಿಸಿತೋ.... ಅದನ್ನು ನೋಡಿ ಆತ ಸಣ್ಣ ಮಂದಿರದ ನಿರ್ಮಾಣಕ್ಕೆ ತೊಡಗಿಸಿಕೊಂಡಾಗ ಅನೇಕರು ಆತನ ಜತೆ ‘ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕನಸಿನ ಮಾತು. ಅದು ನಮ್ಮ ಜೀವಮಾನದಲ್ಲಿ ಅಸಾಧ್ಯ. ಆದರೆ ನೀನು ಕೈಗೊಂಡ ಕೆಲಸದ ದೆಸೆಯಿಂದಲಾದರೂ ಅಲ್ಲೊಂದು ಭವ್ಯ ಮಂದಿರ ನಿರ್ಮಾಣವಾಗಲಿ’ ಎಂದು ಹೇಳಿದ ಹತಾಶೆಯ ಮಾತುಗಳು ಆತನ ಮನಸ್ಸನ್ನು ಕೊರೆಯತ್ತಿತ್ತು. ಆದರೆ 20 ವರ್ಷಗಳ ನಂತರ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಗೊಂಡು ಬಾಲರಾಮನ ಪ್ರತಿಷ್ಠೆ ದಿನವನ್ನು ಗುರುಪ್ರಸಾದ್ ಸಂತಸದಿಂದ ಎದುರು ನೋಡುತ್ತಿದ್ದಾನೆ. ಜತೆಗೆ ಮನೆಮಂದಿಯೆಲ್ಲಾ ಜ. 22 ರಂದು ಗುರುಪ್ರಸಾದ್ ಅಂದು 2003ರಲ್ಲಿ ಥರ್ಮೋಕೋಲ್ ನಿಂದ ನಿರ್ಮಿಸಿದ ಆ ’ಮಾದರಿ ಮಂದಿರ’ಕ್ಕೆ ಆರತಿಯನ್ನು ಬೆಳಗಲು ಎಣ್ಣೆ - ಬತ್ತಿಯನ್ನು ಅಣಿಗೊಳಿಸುತ್ತಿದ್ದಾರೆ.