ಬೆಳ್ತಂಗಡಿ: ಫ್ಲೈಯಿಂಗ್ ಸ್ಕ್ವಾಡ್ ವಾಹನ ತಪಾಸಣೆ ಚುರುಕು

| Published : Apr 11 2024, 12:50 AM IST

ಬೆಳ್ತಂಗಡಿ: ಫ್ಲೈಯಿಂಗ್ ಸ್ಕ್ವಾಡ್ ವಾಹನ ತಪಾಸಣೆ ಚುರುಕು
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ನೀತಿ ಸಂಹಿತೆ ಪಾಲಿಸುವ ಸಲುವಾಗಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಹಾಗೂ ನಾರಾವಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು ನಿರಂತರ ವಾಹನ ತಪಾಸಣೆ ನಡೆಯುತ್ತಿವೆ. ತಾಲೂಕಿನ ಅಲ್ಲಲ್ಲಿ ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಗಳು ಕಾರ್ಯನಿರ್ವಹಿಸುತ್ತಿದ್ದು ತಾಲೂಕಿನ ಬೆಳ್ತಂಗಡಿ, ಕೊಕ್ಕಡ ಹಾಗೂ ವೇಣೂರು ಹೋಬಳಿಗಳ ವ್ಯಾಪ್ತಿಯ ಹೆದ್ದಾರಿ ಹಾಗೂ ಇತರ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿವೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಚುನಾವಣೆ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳು ತಮ್ಮ ಕಾರ್ಯಚರಣೆ ಚುರುಕುಗೊಳಿಸಿವೆ. ಚುನಾವಣಾ ನೀತಿ ಸಂಹಿತೆ ಪಾಲಿಸುವ ಸಲುವಾಗಿ ಈಗಾಗಲೇ ತಾಲೂಕಿನ ಚಾರ್ಮಾಡಿ ಹಾಗೂ ನಾರಾವಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು ನಿರಂತರ ವಾಹನ ತಪಾಸಣೆ ನಡೆಯುತ್ತಿವೆ.

ಇದಲ್ಲದೆ ತಾಲೂಕಿನ ಅಲ್ಲಲ್ಲಿ ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಗಳು ಕಾರ್ಯನಿರ್ವಹಿಸುತ್ತಿದ್ದು ತಾಲೂಕಿನ ಬೆಳ್ತಂಗಡಿ, ಕೊಕ್ಕಡ ಹಾಗೂ ವೇಣೂರು ಹೋಬಳಿಗಳ ವ್ಯಾಪ್ತಿಯ ಹೆದ್ದಾರಿ ಹಾಗೂ ಇತರ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿವೆ.

ಚೆಕ್ ಪೋಸ್ಟ್ ನಂತೆ ಇಲ್ಲೂ ಕೂಡ ಪ್ರತಿಯೊಂದು ವಾಹನಗಳಲ್ಲಿ ಕೊಂಡೊಯ್ಯುವ ಸಾಮಗ್ರಿಗಳನ್ನು ಪರಿಶೀಲಿಸಲಾಗುತ್ತಿದೆ. ಓರ್ವ ಅಧಿಕಾರಿ, ಪೊಲೀಸ್, ಫೋಟೋಗ್ರಾಫರ್ ಸೇರಿ ನಾಲ್ಕರಿಂದ ಐದು ಜನರ ತಂಡ ಇರುತ್ತದೆ. ಇಲ್ಲಿ ತಪಾಸಣೆ ನಡೆಸುವ ಪ್ರತಿಯೊಂದು ವಾಹನದ ಫೋಟೋ ತೆಗೆದು ಚುನಾವಣೆ ಕಚೇರಿಗೆ ಅಪ್ಲೋಡ್ ಮಾಡಲಾಗುತ್ತದೆ.

ಬೆಳ್ತಂಗಡಿ ತಾಲೂಕಿನ ಮೂರು ಹೋಬಳಿಗಳಿಗೆ ಒಂಬತ್ತು ತಂಡಗಳನ್ನು ರಚಿಸಲಾಗಿದ್ದು ತಂಡಗಳಿಗೆ ವಾಹನ ಸೌಲಭ್ಯವನ್ನು ನೀಡಲಾಗಿದೆ. ಬೆಳಗ್ಗೆ 6ರಿಂದ 2, ಮಧ್ಯಾಹ್ನ 2ರಿಂದ ರಾತ್ರಿ 10 ಹಾಗೂ ರಾತ್ರಿ 10 ರಿಂದ ಮರುದಿನ ಬೆಳಗ್ಗೆ 6 ಗಂಟೆ ತನಕ ಬೇರೆ ಬೇರೆ ತಂಡಗಳು ಪಾಳಿಯಲ್ಲಿ ಕಾರ್ಯಾಚರಣೆ ನಡೆಸುತ್ತವೆ.

ಈ ಕರ್ತವ್ಯ ನಿರ್ವಹಣೆ ಗೆ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ತಮಗೆ ಸೂಚಿಸಿದ ಹೋಬಳಿ ಮಟ್ಟದ ರಸ್ತೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.