ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ರಾಜ್ಯ ಸರಕಾರ ಅನುದಾನ ತಡೆ ಹಿಡಿಯುವ ಮೂಲಕ ಅಪಮಾನ ಮಾಡುವ ಕೆಲಸ ಮಾಡಿದೆ. ಅಂಬೇಡ್ಕರ್ ಆಶಯಕ್ಕೆ ಬದ್ಧವಾಗಿ ತತ್ವ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಳ್ತಂಗಡಿ, ತಾಲೂಕು ಆಡಳಿತ ವತಿಯಿಂದ ಭಾನುವಾರ ಬೆಳ್ತಂಗಡಿ ತಾಲೂಕು ಆಡಳಿತದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಮಾತನಾಡಿ, ನಮ್ಮ ಹಕ್ಕನ್ನು ಅರಿತು ಜಾತಿ, ಮತ ಬಿಟ್ಟು ಸಂವಿಧಾನ ಆಶಿಸಿದಂತೆ ಶ್ರೇಷ್ಠ ಭಾರತ ಕಟ್ಟೋಣ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ. ಆ್ಯಂಟನಿ ಟಿ.ಪಿ. ಪ್ರಧಾನ ಭಾಷಣ ಮಾಡಿ, ದೇಶ ಅಭಿವೃದ್ಧಿ ಜತೆಗೆ ಪ್ರತಿಯೊಬ್ಬನ ಅಭಿವೃದ್ಧಿಯಾಗಬೇಕಿದೆ ಎಂದು ಆಶಿಸಿದರು.ರಾಜ್ಯಸಭಾ ಸದಸ್ಯ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಂದೇಶವನ್ನು ತಾ.ಪಂ. ಇ.ಒ ಭವಾನಿ ಶಂಕರ್ ಸಂದೇಶ ವಾಚಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಮುಖ್ಯಾಧಿಕಾರಿ ರಾಜೇಶ್ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಸಿಡಿಪಿಒ ಪ್ರಿಯಾ ಆಗ್ನೆಸ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಜೋಸೆಫ್ ಎನ್.ಎಂ. ಇದ್ದರು.
ತಾ.ಪಂ. ಇ.ಒ ಭವಾನಿ ಶಂಕರ್ ಸ್ವಾಗತಿಸಿದರು. ಘಟಕಾಧಿಕಾರಿ ಜಯಾನಂದ್ ಲಾಯಿಲ ವಂದಿಸಿದರು. ಸಿ.ಆರ್.ಪಿ.ಗಳಾದ ವಾರಿಜಾ, ರಾಜೇಶ್ ನಿರೂಪಿಸಿದರು.ಮಾರಿಗುಡಿ ಮೈದಾನದಿಂದ ತಾಲೂಕು ಮಟ್ಟದ ಅಧಿಕಾರಿಗಳು ಸಹಿತ ಆರಕ್ಷಕ ಸಿಬ್ಬದಿ, ಶಾಲಾ ಮಕ್ಕಳ ಜತೆಗೂಡಿ ಮೆರವಣಿಗೆ ನಡೆಯಿತು. ಎಸ್.ಡಿ.ಎಂ. ಕಾಲೇಜು ರಾಷ್ಟ್ರಗೀತೆ, ವಾಣಿ ಆ.ಮಾ.ಶಾಲೆ ಧ್ವಜಗೀತೆ ಮತ್ತು ರೈತಗೀತೆ, ಬೆಳ್ತಂಗಡಿ ಸ.ಪ್ರೌ.ಶಾಲೆ ನಾಡಗೀತೆಯನ್ನು, ಹೋಲಿ ರೆಡೀಮರ್ ಆ.ಮಾ.ಶಾಲೆ, ಸಂತ ತೆರೆಸ ಪ್ರೌಢಶಾಲೆ ಮಕ್ಕಳು ವಂದೇ ಮಾತರಂ ಗೀತೆ ಹಾಡಿದರು.