ಬೆಳ್ತಂಗಡಿ: ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ

| Published : Sep 09 2025, 01:01 AM IST

ಸಾರಾಂಶ

ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಗುರು ಜಯಂತಿ ಹಾಗೂ ಕೆ.ಪದ್ಮನಾಭ ಮಾಣಿಂಜ ಇವರಿಗೆ ನಡೆದ ನುಡಿ ನಮನ ಕಾರ್ಯಕ್ರಮ ನೆರವೇರಿತು.

ಬೆಳ್ತಂಗಡಿ: ಸಮಾಜದಲ್ಲಿ ಅನೇಕರು ಮಹಾತ್ಮರಾದರೂ ನಾರಾಯಣ ಗುರುಗಳು ದೇವರ ಸ್ಥಾನವನ್ನು ಪಡೆದುಕೊಂಡು ಪೂಜಿತರಾಗಿದ್ದಾರೆ. ಅವರ ವಿಚಾರಧಾರೆಯನ್ನು ಪಾಲಿಸುವುದರಿಂದ ಇಡೀ ಜಗತ್ತು ಸ್ವಾಸ್ಥ್ಯವಾಗಿರಲು ಸಾಧ್ಯ. ಹಾಗಾಗಿಯೇ ಕ್ರೈಸ್ತ ಪರಮೋಚ್ಛ ಗುರುಗಳು ಕೂಡ ಜಗತ್ತಿಗೆ ನಾರಾಯಣ ಗುರುಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಹೇಳಿದ್ದಾರೆ.ಭಾನುವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ, ಬೆಳ್ತಂಗಡಿ ಆಶ್ರಯದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಗುರು ಜಯಂತಿ ಹಾಗೂ ಕೆ.ಪದ್ಮನಾಭ ಮಾಣಿಂಜ ಇವರಿಗೆ ನಡೆದ ನುಡಿ ನಮನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಇಂದು ನಮ್ಮೊಳಗೆ ಕೀಳರಿಮೆ ಇರಬಾರದು. ಸಣ್ಣ ಕೆಲಸ ಮಾಡಿಯೂ ದೊಡ್ಡ ಗೌರವ ಪಡೆಯಬಹುದು. ನಾರಾಯಣ ಗುರುಗಳ ವಿಚಾರಧಾರೆ ಪಾಲಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದ ಆಸ್ತಿಯಾಗಿ ಕೆಲಸ ಮಾಡುವ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಹರೀಶ್ ಕುಮಾರ್ ಮಾತನಾಡಿ, 10 ಸಾವಿರದಿಂದ ಆರಂಭವಾದ ಸಂಘದ ವಿದ್ಯಾರ್ಥಿವೇತನ ಇಂದು 10 ಲಕ್ಷಕ್ಕೆ ತಲುಪಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಗುರುಗಳ ಪ್ರಸಾದ ಎಂದು ಭಾವಿಸಬೇಕು. ಅದನ್ನು ವಿದ್ಯೆಗಾಗಿ ಸದ್ವಿನಿಯೋಗ ಮಾಡಬೇಕು ಎಂದರು.ಮಂಗಳೂರು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಜಯಾನಂದ ಎಂ ಇವರು ಗುರು ಸಂದೇಶ ನೀಡಿದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು.

ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಲೋಕಾಯುಕ್ತ ನಿವೃತ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಕೆ.ಇ.ಎಸ್., ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ ಬಂಗೇರ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್, ಸಂಘದ ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರ್ ಇದ್ದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಪ್ಪ ಪೂಜಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿಯ ಪ್ರಾಂಶುಪಾಲ ಪ್ರೊ. ಸುರೇಶ್ ಪೂಜಾರಿ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ, ಶೈಕ್ಷಣಿಕ ಸಾಧಕರಾದ ಸಾತ್ವಿಕ್ ಎಸ್ ಪೂಜಾರಿ ಹೊಸಂಗಡಿ, ಪ್ರಾರ್ಥನ ಹೆಚ್.ಕೆ., ಸುಪ್ರಿಯಾ ಎಸ್, ಆಕರ್ಷ ಕೆ, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧಕಿ ಅಪೇಕ್ಷಾ ಎನ್.ಎಸ್., ಚಿತ್ರನಟ ದೀಕ್ಷಿತ್ ಅಂಡಿಂಜೆ ಇವರನ್ನು ಸನ್ಮಾನಿಸಲಾಯಿತು.

ಸುಮಾರು 200 ವಿದ್ಯಾರ್ಥಿಗಳಿಗೆ 9 ಲಕ್ಷ 67 ಸಾವಿರ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ಸಂಘದ ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ ಹಾಗೂ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬಿಲ್ಲವ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ವಿನೋದಿನಿ ರಾಮಪ್ಪ ವೈಯಕ್ತಿಕವಾಗಿ ವಿದ್ಯಾರ್ಥಿ ವೇತನ ನೀಡಿದರು.ವಿನೋದಿನಿ ರಾಮಪ್ಪ ಮತ್ತು ಬಳಗದವರು ಪ್ರಾರ್ಥಿಸಿದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಕಾರ್ಯದರ್ಶಿ ನಿತೀಶ್ ಹೆಚ್ ಕೋಟ್ಯಾನ್ ಪ್ರಸ್ತಾವಿಸಿ ಸ್ವಾಗತಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು