ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

| Published : Aug 16 2025, 12:02 AM IST

ಸಾರಾಂಶ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ವಠಾರದಲ್ಲಿ ನಡೆದ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಆಪರೇಷನ್ ಸಿಂಧೂರದ ಮೂಲಕ ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿ ದೇಶಕ್ಕೆ ಗರಿಮೆ ತಂದ ಸಂದರ್ಭವಿದು. ಹೀಗಾಗಿ ಇಂದಿನ ದಿನ ವಿಶೇಷ ಮಹತ್ವದ್ದಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಡಳಿತ ಸೌಧದ ವಠಾರದಲ್ಲಿ ನಡೆದ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ಅವರು ಮಾತನಾಡಿದರು.ಜಗತ್ತಿನಲ್ಲಿ ಭಾರತ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ಉದ್ದಿಮೆ ಕ್ಷೇತ್ರಗಳಲ್ಲಿ ಭಾರತೀಯರು ತೋಡಗಿಸಿಕೊಂಡಿದ್ದು ಭಾರತ ಜಗತ್‌ವಂದ್ಯವಾಗುವತ್ತ ಸಾಗುತ್ತಿದೆ. ನಾವೆಲ್ಲರೂ ಭಾರತದ ಏಳಿಗೆಗಾಗಿ ಶಕ್ತಿ ತುಂಬುವ ಕಾರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.ತಹಸೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣ ನೆರವೇರಿಸಿ, ಸಮಾನತೆ ಕಾಣಬೇಕಾದರೆ ವೈಜ್ಞಾನಿಕತೆಯ ಅರಿವಿರಬೇಕು. ಮನುಷ್ಯತ್ವವನ್ನು ಮೈಗೂಡಿಸಿಕೊಂಡು ಸದೃಢ ದೇಶ ನಿರ್ಮಿಸಲು ಮುನ್ನಡೆಯೋಣ ಎಂದರು.ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕುಶಾಲಪ್ಪ ಎಸ್. ಪ್ರಧಾನ ಭಾಷಣ ಮಾಡಿದರು.ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಮುಖ್ಯಾಧಿಕಾರಿ ರಾಜೇಶ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಆರಕ್ಷಕ ಹಾಗೂ ಗೃಹ ರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಬುಲ್ ಬುಲ್, ಬ್ಯಾಂಡ್ ಸೆಟ್‌ನವರ ಆಕರ್ಷಕ ಪಥ ಸಂಚಲನ ನಡೆಯಿತು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ಸ್ವಾಗತಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್. ಬಕ್ಕಪ್ಪ ವಂದಿಸಿದರು. ಶಿಕ್ಷಕರಾದ ಮಮತಾ ಮತ್ತು ರಾಜೇಶ್ ನೆಲ್ಯಾಡಿ ನಿರೂಪಿಸಿದರು.ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಾದ ಶರೋಣ್ ಡಿಸೋಜ, ತನ್ವಿ ಭಟ್ ಎಂ., ಮನಶ್ರೀ, ಸುಪ್ರಿಯಾ ಎಸ್., ಅರ್ಮಾನ್ ರಿಯಾಝ್, ಅಂಶಿತಾ ಜೋಸೆಫ್, ಚಿನ್ಮಯ್ ರೈ, ಅಮೃತಾ, ವರ್ಷ ಆರ್., ಸುಧಾಮ ಎಸ್., ಶರವತ್ ಎಸ್. ಜೈನ್, ಗಾಯನ ಎಂ.ವೈ. ಹಾಗೂ ದೀಪಿಕಾ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.