ಬೆಳ್ತಂಗಡಿ: ತಾಲೂಕು ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ವಿಶೇಷ ಸಭೆಯು ಎಸ್.ಡಿ.ಎಂ. ಕಲಾಭವನದ ಪಿನಾಕಿ ಸಭಾಂಗಣದಲ್ಲಿ ಮಂಗಳವಾರ ಜರುಗಿತು. ಸಭಾಧ್ಯಕ್ಷತೆಯನ್ನು ತಾ. ಸಮಿತಿ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.ವ್ಯಸನಮುಕ್ತ ಸಮಾಜ ನಿರ್ಮಾಣದ ಸವಾಲಿನ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ವೇದಿಕೆಯ ಕಾರ್ಯಕ್ರಮಗಳಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ವರದಿ ಸಾಲಿನಲ್ಲಿ ತಾಲೂಕಿನ ಗರ್ಡಾಡಿಯಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸುವ ಬಗ್ಗೆ ನಿರ್ಧರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿ ಮತ್ತು ಯುವ ಸಮೂಹವನ್ನು ಗುರಿಯಾಗಿಸಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಒಟ್ಟು 40 ಕಡೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಸಂಯೋಜಿಸುವುದೆಂದು ತೀರ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಡೆಸಲು ನಿರ್ಧರಿಸಲಾಯಿತು.
ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಜಿಲ್ಲಾ ನಿರ್ದೇಶಕ ದಿನೇಶ್ ಡಿ ಶುಭ ಹಾರೈಸಿದರು.ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷರಾದ ಡಿ.ಎ ರಹಿಮಾನ್, ಕಿಶೋರ್ ಹೆಗ್ಡೆ, ಪಿ.ಕೆ ರಾಜು ಪೂಜಾರಿ, ಜನಜಾಗೃತಿ ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಎಲ್ಲಾ ವಲಯಗಳ ಕಾರ್ಯದರ್ಶಿಗಳು ಇದ್ದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಕ್ರಿಯಾಯೋಜನೆ ಮಂಡಿಸಿ ಸಭೆಯ ಸಂಯೋಜನೆ ಮಾಡಿದರು. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್ ವೇಣೂರು ಅವರ ಆಯ್ಕೆಯನ್ನು ಪ್ರಕಟಿಸಲಾಯಿತು. ಇದುವರೆಗೆ ತಾಲೂಕು ಅಧ್ಯಕ್ಷರಾಗಿ ಯಶಸ್ವಿಯಾಗಿ ಜವಾಬ್ಧಾರಿ ನಿರ್ವಹಿಸಿದ ಕಾಸಿಂ ಮಲ್ಲಿಗೆಮನೆ ಅವರನ್ನು ಸನ್ಮಾನಿಸಲಾಯಿತು.ಗ್ರಾ.ಯೋಜನೆಯ ಬೆಳ್ತಂಗಡಿ ಯೋಜನಾಧಿಕಾರಿ ಯಶೋಧರ ಕೆ ಸ್ವಾಗತಿಸಿದರು. ಜನಜಾಗೃತಿ ಕರಾವಳಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಣೇಶ್ ಆಚಾರ್ಯ ನಿರೂಪಿಸಿ ವಂದಿಸಿದರು.