ಸಾರಾಂಶ
ಸರ್ಕಾರದ ಭೂ ಸುರಕ್ಷಾ ಯೋಜನೆಯಡಿ 43 ಲಕ್ಷ ಕಡತಗಳು, 10 ಸಾವಿರ ವಹಿಗಳ ಗಣಕೀಕರಣ
ವಿಶೇಷ ವರದಿಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಂದಾಯ ಇಲಾಖೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ವೇಣೂರು, ಕೊಕ್ಕಡ ಹೋಬಳಿಗೆ ಸಂಬಂಧಿಸಿದ 81 ಗ್ರಾಮದ ಲಕ್ಷ ಲಕ್ಷ ಕಡತಗಳು ರೆಕಾರ್ಡ್ ರೂಮಿನಲ್ಲಿ (ಅಭಿಲೇಖಾಲಯ ಶಾಖೆ ) ದಾಖಲೆ ರೂಪದಲ್ಲಿ ಶೇಖರಿಸಿಡಲಾಗಿತ್ತು. ಆದರೆ ಇದೀಗ ಸರಕಾರ ಪರಿಚಯಿಸಿದ ಭೂ ಸುರಕ್ಷಾ ಯೋಜನೆಯಡಿ ತಾಲೂಕಿನ 43 ಲಕ್ಷಕ್ಕೂ ಅಧಿಕ ಕಡತಗಳ 2 ಕೋಟಿಗೂ ಅಧಿಕ ಪುಟಗಳನ್ನು ಸಮರೋಪಾದಿಯಲ್ಲಿ ಗಣಕೀರಣಗೊಳಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.ಕಂದಾಯ ಇಲಾಖೆಯಲ್ಲಿ ಪ್ರತಿದಿನ ಹಲವಾರು ದಾಖಲೆಗಳು ಸೃಜನೆಯಾಗುತ್ತವೆ. ಈ ಪೈಕಿ ಆ ದಾಖಲೆಗಳನ್ನು ಎ ವರ್ಗ (ಶಾಶ್ವತ ದಾಖಲೆಗಳು) ಬಿ ವರ್ಗ (30 ವರ್ಷ) ಕಾಪಾಡುವಂತ ದಾಖಲೆಗಳು, ಸಿ ವರ್ಗ (10 ವರ್ಷ) ಕಾಪಾಡುವಂತ ದಾಖಲೆಗಳು, ಡಿ ವರ್ಗ (5 ವರ್ಷ), ಇ ವರ್ಗ (1) ವರ್ಷ ಕಾಪಾಡುವ ದಾಖಲೆಗಳೆಂದು ವರ್ಗೀಕರಣ ಮಾಡಿ ರೆಕಾರ್ಡ್ ರೂಮಿನಲ್ಲಿ ಇರಿಸಲಾಗುತ್ತದೆ. ಇವು ಕಾಲಕಳೆದಂತೆ ನಾಶವಾಗುವುದು, ಕಾಣೆಯಾಗುವುದು, ನಾದುರಸ್ತಿ ಆಗುತ್ತಿತ್ತು. ಇದರಿಂದಾಗಿ ಕೆಲವೊಂದು ಹಳೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು, ತಕರಾರು ಇದ್ದಲ್ಲಿ ಪರಿಶೀಲನೆಗೆ ಸಮಸ್ಯೆ ಎದುರಾಗುತ್ತಿತ್ತು. ಮತ್ತೊಂದೆಡೆ ಅವಘಡ ಸಂಬಂಧಿಸಿದರೆ ಎಲ್ಲಾ ಕಡತಗಳು ಸಂಪೂರ್ಣ ನಾಶವಾಗುವ ಸಾಧ್ಯತೆಯೂ ಇತ್ತು. ಇವೆಲ್ಲದಕ್ಕೆ ಮುಕ್ತಿ ಹಾಡುವ ನೆಲೆಯಲ್ಲಿ ಗಣಕೀಕರಣ ಯೋಜನೆ ಎಲ್ಲೆಡೆ ಆರಂಭಿಸಲಾಗಿದೆ.ಇನ್ನು ತ್ವರಿತ: ಈ ಹಿಂದೆಲ್ಲ ಸಾರ್ವಜನಿಕರು ತಮ್ಮ ಕಡತಗಳ ನಕಲು ಪ್ರತಿ ಪಡೆಯಲು ಮೊದಲಾಗಿ ಲಿಖಿತ ಅರ್ಜಿ ಸಲ್ಲಿಸಬೇಕಿತ್ತು. ಆ ಅರ್ಜಿ ಅನುಸಾರ ರೆಕಾರ್ಡ್ ರೂಮಿನಿಂದ ಯಾಂತ್ರಿಕವಾಗಿ ಕಡತ ಹುಡುಕಿ ಕಡತ ತೆಗೆದು ನಕಲು ಪ್ರತಿ ತಯಾರಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಹಿ ಹಾಕಿದ ಬಳಿಕ, ಅನುಮೋದಿಸಲು ಕನಿಷ್ಟ ಪಕ್ಷ 15-20 ದಿನ ಕಾಲಾವಕಾಶ ಬೇಕಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಜ.1ರಿಂದ ಭೂ ಸುರಕ್ಷಾ ಯೋಜನೆಯಲ್ಲಿ ಕಂದಾಯ ದಾಖಲೆಗಳನ್ನ ಸುರಕ್ಷಿತವಾಗಿ ಕಾಪಾಡುವ ದೃಷ್ಟಿಯಿಂದ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಿ ದಿನದೊಳಗೆ ದಾಖಲೆ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.15 ಲಕ್ಷಕ್ಕೂ ಹೆಚ್ಚಿನ ಪುಟ ಗಣಕೀಕರಣ: ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿ ಎ ಮತ್ತು ಬಿ ವರ್ಗದ ಸುಮಾರು 13,000 ಕ್ಕೂ ಅಧಿಕ ಕಡತಗಳ ಒಟ್ಟು 15 ಲಕ್ಷಕ್ಕೂ ಮೇಲ್ಪಟ್ಟ ಪುಟಗಳನ್ನು ಗಣಕೀಕರಣ ಗೊಳಿಸಲಾಗಿದೆ. ಗಣಕೀಕರಣಗೊಳಿಸಲಾದ ದಾಖಲೆಗಳನ್ನ ವಿತರಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ಕಂದಾಯ ದಾಖಲೆಗಳ ದಾಖಲೀಕರಣಕ್ಕೆ ಹೊರಗುತ್ತಿಗೆ ಆಧಾರದಲ್ಲಿ 6 ಜನ ಸಿಬ್ಬಂದಿ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಪ್ರಸಕ್ತ ಪ್ರತಿದಿನ 10,000 ಕ್ಕೂ ಹೆಚ್ಚಿನ ಪುಟಗಳನ್ನು ಗಣಕೀಕರಣ ಗೊಳಿಸಲಾಗುತ್ತಿದೆ. ಇದೇ ವೇಗದಲ್ಲಿ ಮುಂದುವರೆದರೆ ಸಂಪೂರ್ಣ ದಾಖಲೆಗಳು ಗಣಕೀಕರಣಗೊಳ್ಳಲು ಸುಮಾರು 2 ವರ್ಷ ಕಾಲಾವಕಾಶ ಬೇಕಾಗಬಹುದು ಎಂಬುದು ಅಧಿಕಾರಿಗಳ ನಿಲುವು.ಸಾರ್ವಜನಿಕರಿಗೇನು ಪ್ರಯೋಜನ?:
ಇಷ್ಟೆಲ್ಲ ಮಾಡುವುದರ ಉದ್ದೇಶ, ಸಾರ್ವಜನಿಕರು ತಮಗೆ ಸಂಬಂಧಪಟ್ಟ ಯಾವುದೇ ದಾಖಲೆಗಳ ನಕಲು ಪ್ರತಿ ಕೋರಿದರೂ ತಕ್ಷಣವೇ ಆನ್ ಲೈನ್ ಮೂಲಕ ವಿತರಣೆ ಮಾಡುವ ಪ್ರಕ್ರಿಯೆ ಇದಾಗಿದೆ. ಗಣಕೀಕರಣಕ್ಕೆ ಸಂಬಂಧಪಟ್ಟಂತೆ ತಹಸೀರ್ ಪೃಥ್ವಿ ಸಾನಿಕಮ್, ಉಪತಹಸೀಲ್ದಾರ್ ಜಯಾ ಕೆ. ಅವರು ಮೇಲುಸ್ತುವಾರಿ ನಡೆಸುತ್ತಿದ್ದಾರೆ.ಕಳೆದ ಜೂ.1ರಿಂದ ಭೌತಿಕವಾಗಿ ನಕಲು ಪ್ರತಿ ವಿತರಣೆ ಸ್ಥಗಿತಗೊಳಿಸಲಾಗಿದ್ದು, ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಕೋರಿರುವ ಕಡತ ಹುಡುಕಿ ಗಣಕೀಕರಣಕ್ಕೆ ಒಳಪಡಿಸಿದ ನಂತರವೇ ಡಿಜಿಟಲ್ ನಕಲು ಪ್ರತಿ ವಿತರಿಸುವ ಪ್ರಕ್ರಿಯೆಗೆ ಚಾಲನೆಗೆ ನೀಡಿ ಪ್ರತಿಗಳನ್ನು ವಿತರಿಸಲಾಗುತ್ತಿದೆ.
..................ಭೂ ಸುರಕ್ಷಾ ಯೋಜನೆಯಡಿ ಎಲ್ಲ ದಾಖಲೆಗಳನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಲ್ಲ ವಿಚಾರಕ್ಕೆ ಸಂಬಂಧಿಸಿದ ಕಡತಗಳು ಸುರಕ್ಷಿತವಾಗಿ ಇರಿಸಲು ಸರ್ಕಾರ ಯೋಜನೆ ಕಾರ್ಯರೂಪಕ್ಕೆ ತಂದಿದೆ. ತಾಲೂಕಿನಲ್ಲಿ 13,136 ಕಡತಗಳಲ್ಲಿ 11,93,095 ಪುಟ, 56,545 ಪಿಡಿಡಫ್ (ಪಿ.ಡಿ.ಎಫ್) ಗಳನ್ನು ಗಣಕೀಕರಣಗೊಳಿಸಲಾಗಿದೆ.-ಪೃಥ್ವಿ ಸಾನಿಕಮ್, ತಹಸೀಲ್ದಾರ್, ಬೆಳ್ತಂಗಡಿ.
ಫೋಟೋ: ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ರೆಕಾರ್ಡ್ ರೂಮಿನಲ್ಲಿ ಕಡತ ಗಣಕೀಕರಣಗೊಳಿಸುವ ಪ್ರಕ್ರಿಯೆ.