ಮುಳಿಕ್ಕಾರು ಪರಿಸರದ ಮಲೆಕುಡಿಯ ಕಾಲನಿಯಲ್ಲಿ 80 ಕ್ಕೂ ಹೆಚ್ಚು ಕುಟುಂಬಗಳು, 10 ಕ್ಕೂ ಹೆಚ್ಚು ಇತರ ಸಮುದಾಯದ ಕುಟುಂಬಗಳು ತಲೆತಲಾಂತರಗಳಿಂದಲೂ ವಾಸಿಸುತ್ತಿವೆ. ಆದರೆ ಈ ಪ್ರದೇಶಕ್ಕೆ ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲ. ರಸ್ತೆ ನಿರ್ಮಿಸಿಕೊಡಿ ಎಂಬ ಜನರ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆಯೇ ದೊರೆತಿಲ್ಲ. ಈ ಕಾರಣದಿಂದ ಜನರು ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಬೆಳ್ತಂಗಡಿ: ಮುಳಿಕ್ಕಾರು ಪರಿಸರದ ಮಲೆಕುಡಿಯ ಕಾಲನಿಯಲ್ಲಿ 80 ಕ್ಕೂ ಹೆಚ್ಚು ಕುಟುಂಬಗಳು, 10 ಕ್ಕೂ ಹೆಚ್ಚು ಇತರ ಸಮುದಾಯದ ಕುಟುಂಬಗಳು ತಲೆತಲಾಂತರಗಳಿಂದಲೂ ವಾಸಿಸುತ್ತಿವೆ. ಆದರೆ ಈ ಪ್ರದೇಶಕ್ಕೆ ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲ. ರಸ್ತೆ ನಿರ್ಮಿಸಿಕೊಡಿ ಎಂಬ ಜನರ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆಯೇ ದೊರೆತಿಲ್ಲ. ಈ ಕಾರಣದಿಂದ ಜನರು ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಭಾರಿ ಗಾತ್ರದ ಕಲ್ಲು: ಈ ಪ್ರದೇಶದ ಪಕ್ಕಾ ಮಣ್ಣಿನ ರಸ್ತೆಯಲ್ಲಿ ಭಾರಿ ಗಾತ್ರದ ಕಲ್ಲುಗಳು, ಮರದ ಬೇರುಗಳು ಜೊತೆಗೆ ರಸ್ತೆ ಮಧ್ಯೆದಲ್ಲೇ ಪ್ರಕೃತಿ ರೂಪಿಸಿದ ತಾತ್ಕಾಲಿಕ ಚರಂಡಿಯೂ ನಿರ್ಮಾಣವಾಗಿದೆ. ಇದರಲ್ಲಿಯೇ ಜನ, ವಾಹನ ಸಂಚಾರ ಮಾಡುವ ಸ್ಥಿತಿಯಿದೆ. ತುರ್ತು ಅಗತ್ಯಗಳಿಗೆ ಆ್ಯಂಬುಲೆನ್ಸ್ ವಾಹನಗಳೂ ಕೂಡ ಇಲ್ಲಿ ಬರಲು ಒಪ್ಪುವುದಿಲ್ಲ. ಇಂತಹ ಸ್ಥಿತಿಯಿದ್ದರೂ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ರಸ್ತೆ ಡಾಂಬರು ಕಾಮಗಾರಿ, ಅಥವಾ ಕಾಂಕ್ರೀಟಿಕರಣಕ್ಕಾಗಿ ಜನರು ಚುನಾವಣಾ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಮುಳಿಕ್ಕಾರು ರಸ್ತೆಯು ಧರ್ಮಸ್ಥಳ ಬಸದಿಯಿಂದ ಕೊಲ್ಪೆ, ನೆಲ್ಲಿಕಟ್ಟೆ, ಮುಳಿಕ್ಕಾರು ಪ್ರದೇಶಕ್ಕೆ 5 ಕಿಮೀ ದೂರದಲ್ಲಿದೆ. ಇಲ್ಲಿಂದ ಭೀಮಂಡೆ ಪ್ರದೇಶದ 6 ಕಿಮೀ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಧರ್ಮಸ್ಥಳ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಕಲ್ಯಾಣ ಇಲಾಖೆಗೂ ಮನವಿ ಜನರು ಮನವಿ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಂದ ಆದಿಯಾಗಿ ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರ ವರೆಗೂ, ಶಾಸಕ, ಸಂಸದರಿಗೂ ಮನವಿ ಮೇಲೆ ಮನವಿ ಸಲ್ಲಿಸಿದರೂ ಯಾರೂ ಇತ್ತ ಕಡೆಗೆ ತಲೆಯೂ ಹಾಕಿಲ್ಲ ಎನ್ನುವುದಕ್ಕೆ ರಸ್ತೆಯ ದುರವಸ್ಥೆಗಳೇ ಸಾಕ್ಷಿ ನುಡಿಯುತ್ತದೆ. ಅಧಿಕಾರಿಗಳು ಯಾವುದೋ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಂತೆ ಬಂದು ಹೋಗಿದ್ದು ಬಿಟ್ಟರೆ ಉಳಿದ ಯಾವುದೇ ಕೆಲಸವಾಗಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಈ ಪ್ರದೇಶದ ಜನರು.ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪ್ರದೇಶದ ಕೋಲ್ಪೆಯಿಂದ ನೆಲ್ಲಿಕಟ್ಟೆ, ಪಿಜತಡ್ಕದಿಂದ ಭೀಮಂಡೆವರೆಗಿನ ರಸ್ತೆಯ ಅವ್ಯವಸ್ಥೆಯ ಸರಿ ಪಡಿಸಲು ಹೋರಾಟದ ಅಂತಿಮ ಭಾಗವಾಗಿ ಚುನಾವಣಾ ಬಹಿಷ್ಕಾರ ಹಾಕಲಾಗಿದೆ. ಭೀಮಂಡೆ ಪ್ರದೇಶದಲ್ಲಿ 26, ಕೊಲ್ಪೆ 20, ನೆಲ್ಲಿಕಟ್ಟೆ 15, ಕುದ್ರಾಯ 3 ಮತ್ತು ಹೊಳೆಬದಿ 13 ಹೀಗೆ ಒಟ್ಟು 77 ಮಲೆಕುಡಿಯ ಕುಟುಂಬಗಳು ಈ ಪ್ರದೇಶದಲ್ಲಿ ವಾಸವಾಗಿವೆ.
ನಮ್ಮ ರಸ್ತೆಗೆ ಇನ್ನೂ ಡಾಂಬರು, ಕಾಂಕ್ರಿಟ್ ಭಾಗ್ಯ ಬಂದಿಲ್ಲ. ಬಾಡಿಗೆಗೆ ಆಟೋ ರಿಕ್ಷಾವೂ ಇಲ್ಲಿಗೆ ಬರುವುದಿಲ್ಲ, ಅತ್ಯಂತ ಅಪಾಯಕಾರಿ ರಸ್ತೆಯಲ್ಲಿ ನಾವು ಓಡಾಡುತ್ತಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ನೀಡಿ, ಅವರ ಆಶ್ವಾಸನೆಗಳು ಕೇಳಿ ಸಾಕಾಗಿದೆ. ಅಂತಿಮವಾಗಿ ಚುನಾವಣಾ ಬಹಿಷ್ಕಾರ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ರಸ್ತೆ ಸರಿಪಡಿಸುವವರೆಗೆ ಮುಂದೆ ಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ.-ಸುಂದರ ಮುಳಿಕಾರು, ಸ್ಥಳೀಯ ನಿವಾಸಿ