ಬೆಳ್ತಂಗಡಿ: ಗಾಳಿ ಮಳೆಗೆ ಹಲವೆಡೆ ಹಾನಿ

| Published : Jul 27 2025, 12:04 AM IST

ಸಾರಾಂಶ

ಕಳೆದ ರಾತ್ರಿ ಸುರಿದ ಮಳೆಗೆ ಲಾಯಿಲ-ಕಿಲ್ಲೂರು ಸಾಗುವ ಗಾಂಧಿನಗರ ಸಮೀಪ ಮರ ಬಿದ್ದಿದೆ. ಕೇಳ್ತಜೆ ಸಮೀಪ ರಸ್ತೆಗೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮೆಸ್ಕಾಂ ಇಲಾಖೆ ನಿರಂತರ ದುರಸ್ತಿ ಕಾರ್ಯ ನಡೆಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ೭೩ರಲ್ಲಿ ಕುವೆಟ್ಟು ಗ್ರಾಮದ ವರಕಬೆ ಬಳಿ ರಸ್ತೆಗೆ ಅಡ್ಡಲಾಗಿ ಬೃಹದಾಕಾರದ ಮರ ಉರುಳಿದ ಪರಿಣಾಮ ಸುಮಾರು ಒಂದು ತಾಸು ಕಾಲ ಸಂಚಾರಕ್ಕೆ ತೊಡಕು ಉಂಟಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನಲ್ಲಿ ಕಳೆದ ಎರಡು- ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶನಿವಾರ ಮುಂಜಾನೆ ಬಿಡುವಿನ ವಾತಾವರಣ ಕಂಡುಬಂದಿದ್ದರೂ ಮಧ್ಯಾಹ್ನ ಬಳಿಕ ಗಾಳಿ ಮಳೆಯಾಗಿದೆ.

ಮುಂಡಾಜೆ, ಇಂದಬೆಟ್ಟು, ಕಡಿರುದ್ಯಾವರ, ನಡ ಸುತ್ತಮುತ್ತ ಭಾರಿ ಗಾಳಿ ಮಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಅಡಕೆ ಮರಗಳು ಧರೆಗುರುಳಿದೆ.ಕಳೆದ ರಾತ್ರಿ ಸುರಿದ ಮಳೆಗೆ ಲಾಯಿಲ-ಕಿಲ್ಲೂರು ಸಾಗುವ ಗಾಂಧಿನಗರ ಸಮೀಪ ಮರ ಬಿದ್ದಿದೆ. ಕೇಳ್ತಜೆ ಸಮೀಪ ರಸ್ತೆಗೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮೆಸ್ಕಾಂ ಇಲಾಖೆ ನಿರಂತರ ದುರಸ್ತಿ ಕಾರ್ಯ ನಡೆಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ೭೩ರಲ್ಲಿ ಕುವೆಟ್ಟು ಗ್ರಾಮದ ವರಕಬೆ ಬಳಿ ರಸ್ತೆಗೆ ಅಡ್ಡಲಾಗಿ ಬೃಹದಾಕಾರದ ಮರ ಉರುಳಿದ ಪರಿಣಾಮ ಸುಮಾರು ಒಂದು ತಾಸು ಕಾಲ ಸಂಚಾರಕ್ಕೆ ತೊಡಕು ಉಂಟಾಯಿತು.ತೋಟತ್ತಾಡಿಯಲ್ಲಿ ಮರ ಉರುಳಿ ೮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ನಡ ವ್ಯಾಪ್ತಿಯಲ್ಲೂ ಕಿಲ್ಲೂರು ಎಲ್.ಟಿ. ಲೈನ್‌ಗೆ ಸಂಬಂಧಿಸಿ ೧೦ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.ಮುಂಡಾಜೆ-ಧರ್ಮಸ್ಥಳ ರಸ್ತೆಯ ಪಿಲತ್ತಡ್ಕ ಎಂಬಲ್ಲಿ ರಸ್ತೆಗೆ ಮರ ಬಿದ್ದು ಅರ್ಧ ತಾಸು ಸಂಚಾರಕ್ಕೆ ಸಮಸ್ಯೆಯಾಯಿತು. ಬೆಳ್ತಂಗಡಿಯಲ್ಲಿ ದ್ವಿಚಕ್ರ ವಾಹನದ ಶೋರೂಂಗೆ ಮರ ಬಿದ್ದು ದ್ವಿಚಕ್ರ ವಾಹನಗಳಿಗೆ ಹಾನಿ ಉಂಟಾಗಿದೆ. ಮಚ್ಚಿನ ಗ್ರಾಮದ ಲೀಲಾ ಶಿವಪ್ಪ ಗೌಡರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಗುರಿಪಳ್ಳದ ಲೋಕೇಶ್ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮಚ್ಚಿನ ಗ್ರಾಮದ ಅಶೋಕ ನಾವಡರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದೆ. ಬೆಳ್ತಂಗಡಿಯ ಸಂಜಯನಗರದ ಮಹಮ್ಮದ್ ರಫಿ ಎಂಬವರ ಮನೆಯ ಗೋಡೆ ಜರಿದು ಬಿದ್ದಿದೆ.