ಬೇಲೂರು ಆಸ್ಪತ್ರೇಲಿ ರೋಗಿಗಳಿಗೆ ಸಿಗುತ್ತಿಲ್ಲ ಸೌಲಭ್ಯ

| Published : Feb 13 2025, 12:48 AM IST

ಸಾರಾಂಶ

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸರೇ, ಲ್ಯಾಬ್ ಮತ್ತು ಸ್ವಚ್ಛತೆ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ.ಎಸ್. ಭೋಜೇಗೌಡ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸುಧಾರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸರೇ, ಲ್ಯಾಬ್ ಮತ್ತು ಸ್ವಚ್ಛತೆ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ.ಎಸ್. ಭೋಜೇಗೌಡ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸುಧಾರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಿದರು. ಕರವೇ ತಾಲೂಕು ಅಧ್ಯಕ್ಷ ಭೋಜೇಗೌಡ ಮಾತನಾಡಿ, ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿವೆ. ಅದರೆ ಸೌಲಭ್ಯ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಆದರೆ ಬಡ ರೋಗಿಗಳಿಗೆ ಇಲ್ಲಿನ ಸೌಲಭ್ಯ ಸಿಗುತ್ತಿಲ್ಲ. ಇಲ್ಲಿಯ ಸಮಸ್ಯೆಯ ವಿರುದ್ಧ ಈ ಹಿಂದೆ ಪ್ರತಿಭಟನೆ ನಡೆಸಿದಾಗ ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾದ ಹಿನ್ನೆಲೆ ಮೈಸೂರು ವಿಭಾಗದ ಕುಟುಂಬ ಮತ್ತು ಆರೋಗ್ಯ ಇಲಾಖೆಯ ವೈದ್ಯಕೀಯ ವಿಭಾಗದ ಉಪ ನಿರ್ದೇಶಕರು ಸಮಸ್ಯೆ ಸರಿಪಡಿಸಿರುವ ಬಗ್ಗೆ ಪತ್ರ ಮೂಲಕ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ ಎಂದರು. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಸರ್ಕಾರಿ ಲ್ಯಾಬ್ ಸಂಜೆಯ ಸಮಯದಲ್ಲಿ ಕೆಲಸ ಮಾಡುತ್ತಿಲ್ಲ. ಅಲ್ಲದೆ ಕೆಲ ಆಂಬ್ಯುಲೆನ್ಸ್ ಚಾಲಕರು ಒಂದು ದಿನ ಕೆಲಸ ನಿರ್ವಹಿಸಿ ಎರಡು ದಿನದ ಹಾಜರಾತಿ ನೀಡುತ್ತಿರುವುದು, ಅಲ್ಲದೆ ಎಕ್ಸರೇ ಸಿಬ್ಬಂದಿಗಳು ಇಲ್ಲೇ ಕರ್ತವ್ಯ ನಿರ್ವಹಿಸಬೇಕು. ಆದರೆ ವಾಸಸ್ಥಳದಲ್ಲಿ ಇಲ್ಲದೆ ಜಿಲ್ಲಾ ಕೇಂದ್ರದಿಂದ ಬಂದು ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೂ ಸಮವಸ್ತ್ರ ಕಡ್ಡಾಯವಾಗಿದ್ದರೂ ಕೆಲವರು ಇದನ್ನು ಪಾಲಿಸುತ್ತಿಲ್ಲ. ಸ್ವಚ್ಛತೆ ಪರಿಕರಗಳಿಗೆ ೭೦ ಸಾವಿರ ರು. ತಿಂಗಳಿಗೆ ವಿನಿಯೋಗಿಸಲಾಗುತ್ತಿದೆ. ಮಧ್ಯಾಹ್ನದ ವೇಳೆ ಸ್ವಚ್ಛತೆಗಾಗಿ ಒಂದು ಗಂಟೆಗಳ ಹೆಚ್ಚು ಕಾಲ ಬಾಗಿಲು ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಸ್ಕ್ಯಾನಿಂಗ್ ಸೆಂಟರ್ ಪ್ರಾರಂಭ ಮಾಡಲು ಎಲ್ಲಾ ರೀತಿಯ ಸಕಲ ಸಿದ್ದತೆ ಮಾಡಿಕೊಂಡಿದ್ದರೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದರು. ಆಸ್ಪತ್ರೆ ವೈದ್ಯಾಧಿಕಾರಿ ಸುಧಾ ಮಾತನಾಡಿ, ಆಸ್ಪತ್ರೆಯಲ್ಲಿ ಇದ್ದ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿದ್ದು, ಎಕ್ಸರೇ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಸ್ಥಳೀಯ ನಿವಾಸಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇನೆ. ಪ್ರತಿದಿನ ಎರಡು ಅವಧಿಗಳಿಗೆ ಸ್ವಚ್ಛತೆಗೆ ಅದ್ಯತೆ ನೀಡಲಾಗಿದೆ. ಯಾವುದೇ ರೋಗಿಗಳಿಗೆ ಹೊರಗಡೆ ಔಷಧಗಳಿಗೆ ಚೀಟಿ ನೀಡುತ್ತಿಲ್ಲ. ಇರುವಂತಹ ಆ್ಯಂಬ್ಯುಲೆನ್ಸ್ ಚಾಲಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಅವರಿಂದ ಯಾವುದೇ ಗೊಂದಲ ಆದಲ್ಲಿ ನಮ್ಮ ಗಮನಕ್ಕೆ ತರಲು ಸೂಚನೆ ನೀಡಿದ್ದೇನೆ. ಹೆಚ್ಚುವರಿಯಾಗಿ ಬೆಡ್ ವ್ಯವಸ್ಥೆ ಮಾಡಲಾಗಿದ್ದು ಲ್ಯಾಬ್ ಸಮಸ್ಯೆಯಾಗದಂತೆ ಕ್ರಮವಹಿಸಲಾಗುತ್ತಿದೆ ಎಂದರು.ಕರವೇ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಉಪಾಧ್ಯಕ್ಷ ಮಂಜು ಆಚಾರ್, ಕಾರ್ಯದರ್ಶಿ ಕಾರ್ತಿಕ್, ದೇವು ಪ್ರಸಾದ್, ಹುಸೇನ್, ಸತೀಶ್, ನವೀನ್, ಮಾಧ್ಯಮ ಸಲಹೆಗಾರರಾದ ರಾಘವೇಂದ್ರಹೊಳ್ಳ, ಅನಂತರಾಜೇ ಅರಸ್ ಇದ್ದರು.

ಪೋಟೋ

ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕರವೇ ಅಧ್ಯಕ್ಷ ಪಿ ಎಸ್ ಭೋಜೇಗೌಡ ಭೇಟಿ ನೀಡಿ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಿದರು.