ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಗೋವುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಸೋಮವಾರ ಮುಂಜಾನೆ ತಹಸೀಲ್ದಾರ್ ಮಮತಾ .ಎಂ ಅವರು ದಿಢೀರ್ ದಾಳಿ ನಡೆಸಿ 10 ಕ್ವಿಂಟಲ್ ಗೋಮಾಂಸ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಯಗಚಿ ನದಿ ದಂಡೆ ಬಳಿ ಇರುವ ಮುಸ್ತಫಾ ಬೀದಿ, ಪುರಿಭಟ್ಟಿ ಬೀದಿ ಸೇರಿದಂತೆ ಪುರಸಭೆಯ ೨೨ ಹಾಗೂ ೨೩ನೇ ವಾರ್ಡ್‌ನಲ್ಲಿ ರಾಜಾರೋಷವಾಗಿ ಗೋವುಗಳನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಿತ್ತು. ಈ ಮಾಹಿತಿ ಆಧರಿಸಿ ತಹಸೀಲ್ದಾರ್ ಎಂ ಮಮತಾ ಅವರು ಮಫ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹಾಗೂ ಪೊಲೀಸ್ ಪಿಎಸ್ಐ ಪ್ರವೀಣ್ ಕುಮಾರ್ ಹಾಗೂ ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಏಕಕಾಲಕ್ಕೆ ೫ ಮನೆಗಳ ಮೇಲೆ ದಾಳಿ ನೆಡೆಸಿ ಸುಮಾರು ೧೦ ಕ್ವಿಂಟಲ್ (1 ಟನ್) ಗೋಮಾಂಸ ವಶಪಡಿಸಿಕೊಂಡರು.ಕಳೆದ ವಾರದ ಹಿಂದಷ್ಟೇ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎರಡು ಮನೆಗಳ ಮೇಲೆ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡು ಎಚ್ಚರಿಕೆ ನೀಡಲಾಗಿತ್ತು. ಆದರೂ ಅಲ್ಲಿ ಮತ್ತೆ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಮನೆ ಹಿಂಭಾಗದಲ್ಲಿ ಗೊವುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದರು. ದಾಳಿ ನಡೆಸಿದ ಸಂದರ್ಭದಲ್ಲಿ ಗೋವುಗಳನ್ನು ಕಡಿಯುತ್ತಿದ್ದವರು ಪರಿಕರಗಳನ್ನು ಬಿಟ್ಟು ಪರಾರಿಯಾಗಿದ್ದು, ಸಾಮಗ್ರಿಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡರು. ಮನೆಗಳನ್ನು ಬಾಡಿಗೆ ನೀಡಿದವರ ಮೇಲೆ ಕಠಿಣವಾಗಿ ಪ್ರಕರಣ ದಾಖಲಿಸುವಂತೆ ತಾಕೀತು ಮಾಡಿದರಲ್ಲದೆ ಪಶುಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಈ ಭಾಗದಲ್ಲಿ ಎಷ್ಟು ಜಾನುವಾರುಗಳಿವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದರು.
ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಈ ರೀತಿ ದಂಧೆ ನಡೆಯುತ್ತಿದ್ದರೂ ಏಕೆ ಇಂತಹವರ ಮೇಲೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಲ್ಲದೆ ಪುರಸಭೆ ಮುಖ್ಯಾಧಿಕಾರಿಗಳಿಗೂ ಸಹ ಇವರ ಮೇಲೆ ಪ್ರಕರಣ ದಾಖಲಿಸಿ ನಮಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.ಸ್ಥಳದಲ್ಲಿ ಪಿಎಸ್ಐ ಪ್ರವೀಣ್ ಕುಮಾರ್, ಆರೋಗ್ಯಾಧಿಕಾರಿ ಲೋಹಿತ್, ಕಂದಾಯ ಅಧಿಕಾರಿ ಹನುಮಂತು, ಸಂತೋಷ್, ಹರೀಶ್, ವಿಶ್ವನಾಥ್, ದೇವೆಂದ್ರ ಸೇರಿದಂತೆ ಪೌರಕಾರ್ಮಿಕರು ಹಾಜರಿದ್ದರು.
ಇತ್ತೀಚಿನ ಕೆಲ ವರ್ಷಗಳಿಂದ ತಾಲೂಕಿಗೆ ಬರುತ್ತಿರುವ ಕೆಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು ಈ ದಂಧೆಯನ್ನು ಮಟ್ಟಹಾಕಲು ಪ್ರಯತ್ನಿಸಿ ಹತ್ತಾರು ಬಾರಿ ಈ ಅಡ್ಡೆಗಳ ಮೇಲೆ ದಾಳಿ ಮಾಡಿ ಸಾಕಷ್ಟು ಗೋಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಆದರೂ ನಂತರದಲ್ಲಿ ಆ ಪೊಲೀಸ್ ಅಧಿಕಾರಿಗಳೇ ವರ್ಗಾವಣೆಯಾದರು. ದಂಧೆ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ.ತಹಸೀಲ್ದಾರ್ ಮಮತಾ ಅವರು ಜನರ ಸಮಸ್ಯೆಗಳಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದು, ಅವರೂ ಕೂಡ ಕಳೆದ ಕೆಲ ದಿನಗಳ ಹಿಂದಷ್ಟೇ ದಾಳಿ ನಡೆಸಿ ಗೋಮಾಂಸವನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದರು. ಆದರೂ ಮತ್ತೆ ದಂಧೆ ಮುಂದುವರಿದಿತ್ತು. ಮುಸ್ತಫಾ ಬೀದಿ ಮತ್ತು ಪುರಿಭಟ್ಟಿ ಬೀದಿಗಳಲ್ಲಿ ರಸ್ತೆಗಳು ಕಿರಿದಾಗಿದ್ದು, ಅಲ್ಲಿ ದಾಳಿ ನಡೆಸಲು ಸರ್ಕಾರಿ ಜೀಪಿನಲ್ಲಿ ತೆರಳುವ ಸಂದರ್ಭದಲ್ಲಿ ಆರಂಭದಲ್ಲೇ ದಂಧೆಗೆ ಬೆಂಬಲ ನೀಡುವವರು ರಸ್ತೆಯಲ್ಲಿ ಬೇರೆ ವಾಹನವನ್ನು ಅಡ್ಡಲಾಗಿ ನಿಲ್ಲಿಸುವುದು ಮಾಡುತ್ತಿದ್ದರು. ಹಾಗಾಗಿ ಈ ಬಾರಿ ತಹಸೀಲ್ದಾರ್ ಮಮತಾ ಅವರು ದೂರದಲ್ಲೇ ವಾಹನ ನಿಲ್ಲಿಸಿ ಮಫ್ತಿ ಪೊಲೀಸರೊಂದಿಗೆ ತೆರಳಿ ದಾಳಿ ನಡೆಸಿದ್ದಾರೆ. ಅವರ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.*ಬಾಕ್ಸ್‌ನ್ಯೂಸ್ 1: ಕೆಲ ಸರ್ಕಾರಿ ನೌಕರರಿಂದಲೇ ಮಾಹಿತಿ ಸೋರಿಕೆ ಕೆಚ್ಚೆದೆಯ ಕೆಲ ಅಧಿಕಾರಿಗಳು ಇಂತಹ ದಂಧೆಗಳನ್ನು ಮಟ್ಟ ಹಾಕಲು ದಾಳಿ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳುವ ಮುನ್ನವೇ ದಂಧೆಕೋರರಿಗೆ ಮಾಹಿತಿ ತಲುಪಿ ಅಲ್ಲಿದ್ದ ಮಾಂಸ, ದನಗಳು ಹಾಗೂ ಪರಿಕರಗಳನ್ನೆಲ್ಲಾ ಖಾಲಿ ಮಾಡಿರುತ್ತಿದ್ದರು. ಇದರಿಂದ ದಾಳಿ ಮಾಡಲು ಹೊರಟ ಅಧಿಕಾರಿಗಳಿಗೆ ಹಿನ್ನಡೆಯಾಗುತ್ತಿತ್ತು.
*ಬಾಕ್ಸ್‌ನ್ಯೂಸ್: 2ಕೆಲ ಪ್ರಭಾವಿಗಳು ಹಾಗೂ ನೌಕರರ ಬೆಂಬಲ: ಪಟ್ಟಣದಲ್ ಯಗಚಿ ನದಿ ದಂಡೆಯಲ್ಲಿರುವ ಮುಸ್ತಫಾ ಬೀದಿ ಮತ್ತು ಪುರಿಭಟ್ಟಿ ಬೀದಿ ಎಂದರೆ ಅದು ಗೋಹತ್ಯೆ ಹಾಗೂ ಗೋಮಾಂಸ ಮಾರಾಟಕ್ಕೆ ಕುಖ್ಯಾತಿ ಪಡೆದ ಬಡಾವಣೆಗಳಾಗಿವೆ. ಈ ಬಡಾವಣೆಗಳಲ್ಲಿ ನಡೆಯುತ್ತಿರುವ ಈ ದಂಧೆ ಇಂದು ನಿನ್ನೆಯದಲ್ಲ. ಪಟ್ಟಣದ ಕೆಲ ಮುಖಂಡರು, ಪುಡಾರಿಗಳು ಹಾಗೂ ಕೆಲ ಸರ್ಕಾರಿ ನೌಕರರ ಬೆಂಬಲದೊಂದಿಗೆ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ. ಸರ್ಕಾರದ ನಿಯಮಾವಳಿ ಪ್ರಕಾರ ಗೋಹತ್ಯೆ ನಿಷೇಧವಿದ್ದಾಗ್ಯೂ ಹತ್ತಾರು ವರ್ಷಗಳಿಂದ ಈ ದಂಧೆ ನಡೆಯಲು ಇದೇ ಕಾರಣ.