ಉಪಲೋಕಾಯುಕ್ತರ ದಾಳಿಗೆ ಹೆದರಿ ಮಂಡ್ಯ ತಾಲೂಕಿನ ಬೇಲೂರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇ-ಸ್ವತ್ತುಗಳ ಕಡತಗಳು ಸೇರಿದಂತೆ ನಿವೇಶನ ವರ್ಗೀಕರಣ ಕಡತ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಂದ ಅನುಮೋದನೆಗೊಂಡಿರುವ ಹಲವಾರು ಕಡತಗಳನ್ನು ಬಚ್ಚಿಟ್ಟು ತಪ್ಪಿಸಿಕೊಳ್ಳಲು ಯತ್ನ.
ಕನ್ನಡಪ್ರಭ ವಾರ್ತೆ ಮಂಡ್ಯ
ಉಪಲೋಕಾಯುಕ್ತರ ದಾಳಿಗೆ ಹೆದರಿ ತಾಲೂಕಿನ ಬೇಲೂರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇ-ಸ್ವತ್ತುಗಳ ಕಡತಗಳು ಸೇರಿದಂತೆ ನಿವೇಶನ ವರ್ಗೀಕರಣ ಕಡತ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಂದ ಅನುಮೋದನೆಗೊಂಡಿರುವ ಯೋಜನಾ ವಿನ್ಯಾಸ ನಕ್ಷೆ ಕಡೆತಗಳು ಸೇರಿದಂತೆ ಹಲವಾರು ಕಡತಗಳನ್ನು ಬಚ್ಚಿಟ್ಟು ತಪ್ಪಿಸಿಕೊಳ್ಳಲು ಯತ್ನ ನಡೆಸಿರುವ ಪ್ರಸಂಗ ನಡೆಯಿತು.ಗುರುವಾರ ಮತ್ತು ಶುಕ್ರವಾರ ನಗರದಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಸಾರ್ವಜನಿಕರಿಂದ ದೂರು ಅರ್ಜಿ ವಿಚಾರಣೆ ನಡೆಸಲು ನಗರಕ್ಕೆ ಬುಧವಾರ ಸಂಜೆ ಆಗಮಿಸಿದ್ದು ದಿಢೀರನೆ ಬೇಲೂರು ಗ್ರಾಮ ಪಂಚಾಯ್ತಿಗೆ ತೆರಳಿ ಕಡತಗಳ ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯ್ತಿಯಲ್ಲಿ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಕಂಡುಬಂದಿತು. ಪ್ರತಿಯೊಂದು ದಾಖಲೆಗಳ ಬಗ್ಗೆ ಉಪಲೋಕಾಯುಕ್ತರು ಕೇಳಿದ ಪ್ರಶ್ನೆಗಳಿಗೆ ಪಿಡಿಒ ಸಿದ್ದರಾಜು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಆಕಾಶ್ ಹಾಗೂ ಸಿಬ್ಬಂದಿ ಉತ್ತರ ನೀಡಲು ತಡವರಿಸಿದರು. ಯಾವುದೇ ಕಡತಗಳನ್ನು ಕೇಳಿದರೂ ಅವುಗಳನ್ನು ಒದಗಿಸದೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು.ಪಂಚಾಯ್ತಿಯಲ್ಲಿ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಸಂಬಂಧ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ, ಡಾ.ಶಿವಲಿಂಗಯ್ಯ ಮತ್ತು ಲಕ್ಷ್ಮಿ ಅವರನ್ನು ಉಪಲೋಕಾಯುಕ್ತರು ತರಾಟೆ ತೆಗೆದುಕೊಂಡರು. ಪಂಚಾಯ್ತಿಯಲ್ಲಿ ಕಡತಗಳ ನಿರ್ವಹಣೆ ಬಗ್ಗೆ ನೀವೇನು ಪರಿಶೀಲನೆ ನಡೆಸಿದ್ದೀರಿ. ಯಾವುದೇ ಕಡತ ಕೇಳಿದರೂ ಇಲ್ಲ ಎನ್ನುವ ಉತ್ತರ ಬರುತ್ತಿದೆ. ಇದುವರೆಗೆ ಪಂಚಾಯ್ತಿಗೆ ಭೇಟಿ ನೀಡಿ ಯಾವ ಫೈಲ್ ನೋಡಿದ್ದೀರಿ, ಯಾವ್ಯಾವ ಕಡತಗಳನ್ನು ಎಷ್ಟರಮಟ್ಟಿಗೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿದ್ದೀರಿ, ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ. ಇದೇನಾ ನೀವು ಆಡಳಿತ ನಡೆಸುವ ರೀತಿ ಎಂದು ಕಾರವಾಗಿ ಪ್ರಶ್ನಿಸಿದರು.
ನನಗೆಲ್ಲಾ ಗೊತ್ತಿದೆ. ಅಧಿಕಾರಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಕಡತಗಳನ್ನು ಉದ್ದೇಶಪೂರ್ವಕವಾಗಿ ಬಚ್ಚಿಡುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲವೂ ವ್ಯವಸ್ಥಿತ ಸಂಚು. ಯಾವ ಕಡತಗಳನ್ನು ನೀಡದೆ ನಿರ್ವಹಣೆಯನ್ನು ಮಾಡದೆ ನಮ್ಮನ್ನೇ ದಿಕ್ಕು ತಪ್ಪಿಸುತ್ತಿದ್ದೀರಾ. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಎಲ್ಲರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವೆ. ಕಡತಗಳನ್ನು ಹಾಜರು ಪಡಿಸುವವರೆಗೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಆಸ್ತಿಗೆ ಸಂಬಂಧಿಸಿದ ಕೆಲವೊಂದು ಕಡತವನ್ನು ಪರಿಶೀಲನೆ ನಡೆಸುವ ಸಮಯದಲ್ಲಿ ಅಲ್ಲಲ್ಲಿ ವೈಟ್ನರ್ ನಿಂದ ತಿದ್ದಿರುವುದನ್ನು ಉಪಲೋಕಾಯುಕ್ತರು ಗಮನಿಸಿದರು.
ಇದನ್ನೆಲ್ಲ ಏಕೆ ತಿದ್ದಿದ್ದೀರಿ ಎಂದು ಪ್ರಶ್ನಿಸಿದಾಗ, ಪಂಚಾಯ್ತಿ ಅಧಿಕಾರಿಗಳು ಸ್ವಲ್ಪ ತಪ್ಪಾಗಿತ್ತು ಅದಕ್ಕಾಗಿ ತಿದ್ದಿ ಸರಿ ಮಾಡಲಾಗಿದೆ ಎಂದು ಉತ್ತರಿಸಿದರು. ಈ ಬಗ್ಗೆ ಜೀಪಂ ಉಪ ಕಾರ್ಯದರ್ಶಿಗಳನ್ನು ಪ್ರಶ್ನಿಸಿದಾಗಲೂ ಅದೇ ಉತ್ತರ ಬಂದಿತು. ಇದರಿಂದ ಆಕ್ರೋಶ ಕೊಂಡ ಉಪ ಲೋಕಾಯುಕ್ತರು ಎಲ್ಲೋ ಒಂದು ಕಡೆ ತಪ್ಪಾಗಿದ್ದರೆ ಸರಿ ಎನ್ನಬಹುದಿತ್ತು. ಇಷ್ಟೊಂದು ತಪ್ಪಾಗಲು ಹೇಗೆ ಸಾಧ್ಯ. ಇದನ್ನು ಉದ್ದೇಶಪೂರ್ವಕವಾಗಿ ತಿದ್ದಲಾಗಿದೆ. ನೀವು ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದೀರಿ. ಇದನ್ನು ನೋಡಿದರೆ ಎಲ್ಲರೂ ಈ ತಪ್ಪುಗಳಲ್ಲಿ ಭಾಗಿಯಾಗಿದ್ದೀರಿ ಎಂಬಂತೆ ಕಂಡುಬರುತ್ತಿದೆ ಎಂದು ಸೂಕ್ಷ್ಮವಾಗಿ ಅಧಿಕಾರಿಗಳನ್ನು ಕುಟುಕಿದರು.ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಎಇಇ ಮಂಜುನಾಥ್ ಗೈರು ಹಾಜರಾಗಿದ್ದರಿಂದ ಅವರಿಗೆ ನೋಟಿಸ್ ಜಾರಿಗೊಳಿಸಿ ಸ್ವಯಂ ಪ್ರೇರಿತ ಪ್ರಕರಣದ ಕಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.