ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪ್ರವಾಸಿತಾಣ ಬೇಲೂರಿನ ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಿಸಿದ ಲಯನ್ಸ್ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ ಅ.೧೩ ರ ಭಾನುವಾರ ಬೆಳಿಗ್ಗೆ ೧೦-೩೦ಕ್ಕೆ ಲಯನ್ಸ್ ಪಟ್ಟಣದ ಯಗಚಿ ಸೇತುವೆ ಮಂಜುನಾಥ ಕಲ್ಯಾಣ ಮಂಟಪದ ಹಿಂಭಾಗದಲ್ಲಿನ ಲಯನ್ಸ್ ಭವನದ ಬಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸರ್ವರೂ ಸಕಾಲಕ್ಕೆ ಆಗಮಿಸಬೇಕು ಎಂದು ಬೇಲೂರು ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೩ ವರ್ಷದಿಂದ ಅತ್ಯಂತ ಸಕ್ರಿಯಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಬೇಲೂರು ಲಯನ್ಸ್ ಸಂಸ್ಥೆ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಹತ್ತಾರು ಸಮಾಜಮುಖಿ ಸೇವಾಕಾರ್ಯಗಳ ಮೂಲಕ ಜನಮನ್ನಣೆ ಪಡೆದಿದೆ. ಇಂತಹ ಸಂಸ್ಥೆಗೆ ಸೇವಾ ಚಟುವಟಿಕೆಗಳನ್ನು ನಡೆಸಲು ಸ್ಥಳಾವಕಾಶ ಇಲ್ಲದ ಸಂದರ್ಭದಲ್ಲಿ ಲಯನ್ಸ್ ಸದಸ್ಯರು ಒಟ್ಟಾಗಿ ಸೇರಿ ಯಗಚಿ ಸೇತುವೆಯ ಮಂಜುನಾಥ ಕಲ್ಯಾಣ ಮಂಟಪದ ಬಳಿ ನಿವೇಶನ ಖರೀದಿಸಲಾಗಿತ್ತು. ಬಳಿಕ ಲಯನ್ಸ್ ಭವನ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದಲೇ ಬೇಲೂರು ಲಯನ್ಸ್ ಭವನ ಟ್ರಸ್ಟ್ ಸ್ಥಾಪಿಸಿ,ದಾನಿಗಳಿಂದ ಮತ್ತು ಪದಾಧಿಕಾರಿಗಳು ನೀಡಿದ ಅರ್ಥಿಕ ನೆರವಿನೊಂದಿಗೆ ಇಂದು ಶಿಲ್ಪಕಲಾ ನಾಡು ಬೇಲೂರಿನಲ್ಲಿ ಲಯನ್ಸ್ ಭವನ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ. ಇದೇ ಅ.೧೩ರ ಭಾನುವಾರ ಬೆಳಿಗ್ಗೆ ೧೦-೩೦ಕ್ಕೆ ಸರಿಯಾಗಿ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರು ಮತ್ತು ಶಾಸಕರಾದ ಎಚ್.ಕೆ.ಸುರೇಶ್ ಅವರು ಸೇರಿದಂತೆ ವಿವಿಧ ಗಣ್ಯಮಾನ್ಯರು ಅಧಿಕೃತವಾಗಿ ಲಯನ್ಸ್ ಭವನ ಲೋಕಾರ್ಪಣೆ ನಡೆಸಲಿದ್ದಾರೆ ಎಂದು ತಿಳಿಸಿದರು. ಬೇಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಬೇಲೂರಿನಲ್ಲಿ ಪ್ರಥಮ ಬಾರಿಗೆ ಲಯನ್ಸ್ ಕ್ಲಬ್‌ಗೆ ಪುನರ್ ಜೀವ ನೀಡಿದ ಹೆಗ್ಗಳಿಕೆ ಎನ್.ಆರ್.ಗಿರೀಶ್ ಅವರಿಗೆ ಸೇರುತ್ತದೆ. ಅಂದಿನ ಬಂದ ಆಯಾ ಅಧ್ಯಕ್ಷರು ಸಂಸ್ಥೆಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ದಿಸೆಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡದ ಶಿಬಿರಗಳನ್ನು ಜನಸಂದಣಿಯಲ್ಲಿ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೇಳಗಳನ್ನು ನಡೆಸಿದಲ್ಲದೆ ಉಚಿತ ಚಿಕಿತ್ಸೆ ಮತ್ತು ಔಷಧಿಯನ್ನು ವಿತರಿಸಲಾಗಿದೆ. ಇನ್ನುಮುಂದೆ ಲಯನ್ಸ್ ಸೇವಾ ಚಟುವಟಿಕೆಗಳನ್ನು ನಮ್ಮದೆ ಲಯನ್ಸ್ ಭವನದಲ್ಲಿ ನಡೆಸಲಾಗುತ್ತದೆ. ವಿಶೇಷವಾಗಿ ಲಯನ್ಸ್ ಭವನದ ಉದ್ಘಾಟನೆಗೆ ಜಿಲ್ಲಾ ರಾಜ್ಯಪಾಲರಾದ ಲಯನ್ ಬಿ.ಎಂ.ಭಾರತಿ, ಶಾಸಕರಾದ ಎಚ್.ಕೆ.ಸುರೇಶ್ ಮತ್ತು ಭವನಕ್ಕೆ ಸಂಪೂರ್ಣ ಗ್ರಾನೈಟ್ ನೀಡಿದ ಉದ್ಯಮಿ ಎಸ್. ಎಚ್.ರಾಜಶೇಖರ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ವಲಯಾಧ್ಯಕ್ಷ ಅಬ್ದುಲ್ ಲತೀಫ್, ಮಾಜಿ ಅಧ್ಯಕ್ಷ ವೈ.ಬಿ.ಸುರೇಶ್, ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಖಜಾಂಚಿ ಪ್ರಶಾಂತ್ ಶೆಟ್ಟಿ ಹಾಜರಿದ್ದರು.