ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಗ್ರಾಮೀಣ ಸೊಗಡು ಹಿನ್ನೆಲೆಯ ತಾಯಿ ಶ್ರೀ ಬಾಣಂತಮ್ಮ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಶ್ರೀ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ ಸೋಮವಾರ ಬೆಳಗ್ಗೆಯಿಂದ ಸಂಜೆ ವರೆಗೆ ಗ್ರಾಮದಲ್ಲಿ ದವಸ, ಧಾನ್ಯ, ಹಣ್ಣು, ತರಕಾರಿ ಸಂಗ್ರಹಿಸಿದರು. ಸಂಜೆ 5ರಿಂದ ರಾತ್ರಿ 8 ಗಂಟೆ ತನಕ ಶ್ರೀ ಬಾಣಂತಮ್ಮ, ಶ್ರೀ ಕುಮಾರಲಿಂಗೇಶ್ವರ ದೇವರಿಗೆ ಗಂಗಾಸ್ನಾನ, ಅಡುಗೆ ಒಲೆ ಪೂಜೆ ನಂತರ ರಾತ್ರಿ 9.30 ಗಂಟೆಯಿಂದ ಸಾಂಪ್ರದಾಯಿಕ ಮಡೆಪೂಜೆ ಮಾಡಲಾಯಿತು. ನಂತರ ಗ್ರಾಮಸ್ಥರು ಮತ್ತು ಭಕ್ತರು ಮೆರವಣಿಗೆಯಲ್ಲಿ ಮಡೆಯನ್ನು ಅಡುಗೆ ಒಲೆ ಹತ್ತಿರ ಕೊಂಡೊಯ್ಯಲಾಯಿತು.
ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ತಾಯಿ ಬಾಣತಮ್ಮ, ಪುತ್ರ ಕುಮಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿತು. ಬೆಳಗ್ಗೆ 9ಕ್ಕೆ ತಾಯಿ ಶ್ರೀ ಬಾಣಂತಮ್ಮ ದೇವರರನ್ನು ಅಡ್ಡಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕವಾಗಿ ಬಾಣಂತಮ್ಮ ಜಾತ್ರಾ ಮೈದಾನಕ್ಕೆ ಕರೆತರಲಾಯಿತು. ನಂತರ ದೇವರನ್ನು ಭಕ್ತರ ದರ್ಶನಕ್ಕಾಗಿ ಗುಡಿಯಲ್ಲಿ ಇಡಲಾಯಿತು. ಮಧ್ಯಾಹ್ನ 12 ಗಂಟೆ ವರೆಗೆ ಬಾಣಂತಮ್ಮಳ ಜಾತ್ರೋತ್ಸವ ಮತ್ತು ಭಕ್ತರಿಂದ ಪೂಜೆ ನಡೆಯಿತು. ಬಳಿಕ ಜಾತ್ರಾ ಮೈದಾನದ ಗುಡಿಯಲ್ಲಿಟ್ಟಿದ್ದ ದೇವರನ್ನು ಮೂಲಸ್ಥಾನಕ್ಕೆ ಕರೆತರಲಾಯಿತು.ಮಧ್ಯಾಹ್ನ 1 ಗಂಟೆಯಿಂದ ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವದ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ನೆರವೇರಿತು. ನಂತರ ಶ್ರೀ ಕುಮಾರಲಿಂಗೇಶ್ವರ ದೇವರನ್ನು ದೇವಸ್ಥಾನದಿಂದ ಅಡ್ಡಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿ ಮೆರವಣಿಗೆ ಮೂಲಕ ಕುಮಾರಲಿಂಗೇಶ್ವರನ ಜಾತ್ರಾ ಮೈದಾನದಲ್ಲಿರುವ ಗುಡಿಗೆ ಕರೆತರಲಾಯಿತು. ಅಲ್ಲಿ ಭಕ್ತರು ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ಹರಿಕೆ ಸಲ್ಲಿಸಲಾಯಿತು. ಸಂಜೆ 5.30ರ ವರೆಗೆ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಿತು. ಸಂಜೆ 6 ಗಂಟೆಗೆ ಶ್ರೀ ಕುಮಾರಲಿಂಗೇಶ್ವರ ದೇವರನ್ನು ಮೂಲಸ್ಥಾನಕ್ಕೆ ಕರೆತಂದು ಇಡುವ ಮೂಲಕ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.ಜಾತ್ರಾ ಮಹೋತ್ಸವದಲ್ಲಿ ಬೆಂಬಳೂರು, ಶಿವರಳ್ಳಿ, ಊರುಗುತ್ತಿ, ಮೂದರವಳ್ಳಿ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳು, ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಹಿಳಾ ಭಕ್ತರು ಗ್ರಾಮದ ಶ್ರೀ ಬಾಣಂತಮ್ಮ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಹರಿಕೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಜಾತ್ರೋತ್ಸವದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.