ಕನ್ನಡಪ್ರಭ ವಾರ್ತೆ ಬೆಳಗಾವಿಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಬೆಮೂಲ್) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿದಿನ 3 ಲಕ್ಷ ಕೆ.ಜಿ ಹಾಲು ಸಂಗ್ರಹಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಬೆಮೂಲ್) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿದಿನ 3 ಲಕ್ಷ ಕೆ.ಜಿ ಹಾಲು ಸಂಗ್ರಹಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳಿಂದ ನಿತ್ಯ 3 ಲಕ್ಷ ಕೆ.ಜಿ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ 65 ಸಾವಿರ ಕೆ.ಜಿ ಎಮ್ಮೆ ಹಾಲು ಹಾಗೂ 2.35 ಲಕ್ಷ ಕೆ.ಜಿ ಹಸುವಿನ ಹಾಲು ಸೇರಿದೆ ಎಂದು ಹೇಳಿದ್ದಾರೆ.

ರಾಯಬಾಗ ತಾಲೂಕು 61,800 ಕೆ.ಜಿ ಹಾಲು ಸಂಗ್ರಹಿಸುವ ಮೂಲಕ ಮುಂಚೂಣಿಯಲ್ಲಿದೆ. ಮೂಡಲಗಿ 32,400, ಅಥಣಿ 31,400, ಗೋಕಾಕ 30,000, ಖಾನಾಪುರ 26,300, ರಾಮದುರ್ಗ 20,900, ಬೆಳಗಾವಿ 14,600, ಕಿತ್ತೂರು 14,200, ಬೈಲಹೊಂಗಲ 12,700, ಹುಕ್ಕೇರಿ 12,500, ಚಿಕ್ಕೋಡಿ 9,000, ಕಾಗವಾಡ 5,000 ಹಾಗೂ ನಿಪ್ಪಾಣಿ 2,000 ಕೆಜಿ ಹಾಲು ಸಂಗ್ರಹಿಸುತ್ತಿವೆ. ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳಿಂದ ಒಟ್ಟಾರೆ 27,200 ಕೆಜಿ ಹಾಲು ಸಂಗ್ರಹವಾಗುತ್ತಿದೆ.

ಜಿಲ್ಲೆಯ ಹೈನುಗಾರಿಕಾ ಕ್ಷೇತ್ರದ ಬೆಳವಣಿಗೆ, ಹಾಲು ಉತ್ಪಾದಕರ ಪರಿಶ್ರಮ, ಸಹಕಾರಿ ಮನೋಭಾವ ಹಾಗೂ ಒಕ್ಕೂಟದ ಸಮರ್ಥ ಆಡಳಿತದಿಂದ ಈ ಸಾಧನೆ ಸಾಧ್ಯವಾಗಿದೆ. ಜಿಲ್ಲೆಯ ಹಾಲು ಉತ್ಪಾದಕರು, ಸಹಕಾರಿ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು, ಕಾರ್ಯದರ್ಶಿಗಳು, ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರಂತರ ಪ್ರಯತ್ನಕ್ಕೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈತರಿಗೆ ವಿವಿಧ ಸೌಲಭ್ಯ:

ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಒಕ್ಕೂಟದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಹಾಲು ಉತ್ಪಾದಕ ಸದಸ್ಯರಿಗೆ ಶೇ.60 ರಷ್ಟು ರಿಯಾಯಿತಿ ದರದಲ್ಲಿ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ ಹಾಗೂ ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಸ್ವಂತ ನಿವೇಶನ ಹೊಂದಿರುವ ಸಹಕಾರಿ ಸಂಘಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ತಲಾ ₹5 ಲಕ್ಷ ಅನುದಾನ ನೀಡಲಾಗುತ್ತಿದೆ.

ಹಾಲು ಉತ್ಪಾದಕರ ಹೈನುಗಾರಿಕಾ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ರೈತ ಕಲ್ಯಾಣ ಸಂಘದ ಯೋಜನೆಯಡಿ ಮೃತಪಟ್ಟ ಸದಸ್ಯರ ವಾರಸುದಾರರಿಗೆ ₹60 ಸಾವಿರ ಪರಿಹಾರಧನ ನೀಡಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗೆ ಟರ್ಮ್ ಇನ್ಶೂರೆನ್ಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಹಾಲು ಉತ್ಪಾದಕರಿಗೆ ತರಬೇತಿ, ಹೈನುಗಾರಿಕಾ ಜಾನುವಾರುಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಹಾಗೂ ಗುಣಮಟ್ಟದ ಸೇವೆ ಒದಗಿಸುವ ಮೂಲಕ ಹೈನುಗಾರಿಕೆಯನ್ನು ರೈತರಿಗೆ ಲಾಭದಾಯಕ ಉದ್ಯಮವನ್ನಾಗಿ ರೂಪಿಸಲು ಒಕ್ಕೂಟವು ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಡೇರಿಗೆ ಹಾಲು ಪೂರೈಸಿದರೆ ಸೌಲಭ್ಯ ವಂಚಿತ:

ಜಿಲ್ಲೆಯ ಹಲವು ರೈತರು ಹಾಗೂ ಹಾಲು ಉತ್ಪಾದಕರು ಖಾಸಗಿ ಡೇರಿಗಳಿಗೆ ಹಾಲು ಪೂರೈಸುತ್ತಿರುವುದರಿಂದ ಬೆಮೂಲ್‌ನಿಂದ ದೊರೆಯುವ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ ರೈತರು ಹಾಗೂ ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಬೆಮೂಲ್‌ಗೆ ಪೂರೈಸಿ, ಒಕ್ಕೂಟದ ಮೂಲಕ ದೊರೆಯುವ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿಯೂ ಹಾಲು ಉತ್ಪಾದನೆ ಹೆಚ್ಚಿಸುವುದು, ಹಾಲಿನ ಗುಣಮಟ್ಟ ಕಾಪಾಡುವುದು, ಹಾಲು ಉತ್ಪಾದಕರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಸಹಕಾರಿ ಹೈನುಗಾರಿಕಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ ಒಕ್ಕೂಟ ಮುನ್ನಡೆಯಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.