ಸಾರಾಂಶ
ಅಳ್ನಾವರ: ಸಮೀಪದ ಬೆಣಚಿ ಗ್ರಾಮದೇವಿ ಲಕ್ಷ್ಮಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಎರಡು ದಿನಗಳ ಕಾಲದ ಭವ್ಯ ಹೊನ್ನಾಟದಿಂದ ಗ್ರಾಮವೀಡಿ ಹಳದಿ ಬಣ್ಣದಲ್ಲಿ ಮಿಂದೆದ್ದಿದೆ. ಗುರುವಾರ ಸಂಜೆ ದೇವಿಯನ್ನು ಹೊತ್ತ ಭಕ್ತರು ಹೊನ್ನಾಟವಾಡಿದ ನಂತರ ಸಂಜೆ ಹೊನ್ನಾಟಕ್ಕೆ ಸಂಭ್ರಮದ ತೆರೆ ಬಿತ್ತು.
ಬೆಳಗ್ಗೆ ಆರಂಭವಾದ ಹೊನ್ನಾಟ ಭಕ್ತಿಯಿಂದ ನಡೆಯಿತು. ಮಧ್ಯಾಹ್ನ ಸುಡು ಬಿಸಲಿನ ಪ್ರಯುಕ್ತ ಸುಮಾರು ಮೂರು ಗಂಟೆಗೂ ಅಧಿಕ ಕಾಲ ವಿರಾಮ ನೀಡಲಾಗಿತ್ತು. ಸಮಾಜದ ಎಲ್ಲ ಜಾತಿ ಜನಾಂಗದವರು ಸೇರಿ ಜಾತ್ರೆಯನ್ನು ಒಗ್ಗಟ್ಟು, ಏಕತೆಯ ಸಂಕೇತವಾಗಿ ಆಚರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಇದಕ್ಕೆ ಇಂಬು ನೀಡುವಂತೆ ಮಧ್ಯಾಹ್ನದ ಬಾಯಾರಿಕೆ ನೀಗಿಸಲು ಗ್ರಾಮದ ಮುಸಲ್ಮಾನ ಬಾಂಧವರು ಟ್ರ್ಯಾಕ್ಟರ್‌ನಲ್ಲಿರಿಸಿದ ಬ್ಯಾರೆಲ್‌ನಲ್ಲಿ ತಂಪು ಪಾನಿಯ ತುಂಬಿಕೊಂಡು ನೆರೆದ ಭಕ್ತರಿಗೆ ವಿತರಿಸಿದರು.ಮುಸಲ್ಮಾನ ಬಾಂಧವರು ಜಾತ್ರೆಗಾಗಿ ಸಮಿತಿಗೆ ಹಣದ ರೂಪದಲ್ಲಿ ಕಾಣಿಕೆ ಕೂಡಾ ನೀಡಿ ಔದಾರ್ಯತೆ ತೋರಿದ್ದಾರೆ. ಮುಸಲ್ಮಾನರ ಮನೆಗಳಿಗೆ ಬಣ್ಣ ಹಚ್ಚಲಾಗಿದೆ. ಜಾತ್ರೆ ಸವಿಯಲು ಅವರ ಮನೆಗಳಲ್ಲಿ ಕೂಡಾ ಬೀಗರು, ಸ್ನೇಹಿತರು ಬೀಡು ಬಿಟ್ಟಿದ್ದಾರೆ. ಜಾತ್ರೆಯ ಯಶಸ್ವಿಗಾಗಿ ಹಿರಿಯರಾದ ಅಬ್ದುಕ್ ರಜಾಕ್ ಮುಲ್ಲಾ, ಹಸನ ಶಿಕಾರಿ, ನಜೀರಸಾಬ ದೊಡ್ಡಮನಿ, ಮುನೀರ್ ಶಿಕಾರಿ, ತೌಫಿಕ್ ಮೀರಣ್ಣವರ, ರೆಹಮಾನಸಾಬ ದೊಡ್ಡಮನಿ ಹಾಗೂ ಯುವಕರು ಶ್ರಮಿಸುತ್ತಿದ್ದಾರೆ.
ಬೆಳಗ್ಗೆ ಗ್ರಾಮದ ವಿವಿಧ ಬೀದಿಯಲ್ಲಿ ದೇವಿಯ ಹೊನ್ನಾಟ ಸಡಗರ ನೋಡಲು ದೂರ ದೂರದಿಂದ ಬಂದ ಭಕ್ತರು ಬಂಢಾರದಲ್ಲಿ ಓಕುಳಿಯನ್ನು ಸವಿದರು. ಗ್ರಾಮದ ಬೀದಿಗಳೆಲ್ಲ ಹಳದಿ ಬಣ್ಣದ ಲೇಪನದಿಂದ ಕೂಡಿದ್ದವು. ಹಲವು ವರ್ಷಗಳ ನಂತರ ಸೇರಿದ್ದ ಮಿತ್ರರು, ಬಂಧುಗಳು ಬಂಢಾರದ ಸಂಭ್ರಮದಲ್ಲಿ ಮುಳುಗಿ ಜಾತ್ರೆಗೆ ವಿಶೇಷ ಮೆರಗು ತಂದಿದ್ದರು.ಇಂದು ರಥೋತ್ಸವ: ಜಾತ್ರೆಗೆ ಪ್ರಮುಖ ಘಟ್ಟ ರಥೋತ್ಸವ ಶುಕ್ರವಾರ ಸಹಸ್ರಾರು ಸಂಖ್ಯೆಯ ಭಕ್ತರ ಹರ್ಷೋದ್ಘಾರದ ಮಧ್ಯೆ ನಡೆಯಲಿದ್ದು. ಹಿರಿಯರು ಇದಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ವಿವಿಧ ಮಠಾಧೀಶರ ಆಶೀರ್ವಚನ ನಡೆಯಲಿದೆ. ನಂತರ ಮಠಾಧೀಶರು ತೇರಿನ ಪೂಜೆ ಮಾಡುವ ಮೂಲಕ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಗ್ರಾಮದ ಹೊರ ವಲಯದಲ್ಲಿ ದೂರದಿಂದ ಬರುವ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳ ಗುರುತಿಸಲಾಗಿದೆ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಗ್ರಾಮಕ್ಕೆ ಬರಲು ವಿಶೇಷ ಬಸ್ ಸೇವೆ, ಆರೋಗ್ಯ ತಪಾಸಣಾ ಕೇಂದ್ರ ಇರಲಿದೆ. ನಾಡಿನ ಆನೇಕ ಮಠಾಧೀಶರು, ಸಚಿವರು, ಸಂಸದರು, ಶಾಸಕರು ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಲಾ ತಂಡಗಳ ಸಮಾಗಮ ಇರಲಿದೆ. ಕುಸ್ತಿ ಸೇರಿದಂತೆ ಗ್ರಾಮೀಣ ಸೊಗಡು ಇಮ್ಮಡಿಗೊಳಿಸುವ ಎಲ್ಲ ಕಾರ್ಯಕ್ರಮ ನಡೆಯಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.