ರಸವೇ ಜನನ, ವಿರಸ ಮರಣ, ಸಮರಸವೇ ಜೀವನ ಎಂದು ಸಾರಿದ ಶಬ್ದ ಗಾರುಡಿಗ ಕವಿ ಬೇಂದ್ರೆ ಅವರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು, ಜೀವನವನ್ನು ಪ್ರೀತಿಸಿದರು. ಸುತ್ತಲಿನ ಪರಿಸರದಲ್ಲಿ ಆಧ್ಯಾತ್ಮವನ್ನು ಕಂಡರು.
ಅಯ್ಯಪ್ಪ ಸಜ್ಜನರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಹಟ್ಟಿರಸವೇ ಜನನ, ವಿರಸ ಮರಣ, ಸಮರಸವೇ ಜೀವನ ಎಂದು ಸಾರಿದ ಶಬ್ದ ಗಾರುಡಿಗ ಕವಿ ಬೇಂದ್ರೆ ಅವರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು, ಜೀವನವನ್ನು ಪ್ರೀತಿಸಿದರು. ಸುತ್ತಲಿನ ಪರಿಸರದಲ್ಲಿ ಆಧ್ಯಾತ್ಮವನ್ನು ಕಂಡರು. ಕನ್ನಡ ಕಾವ್ಯಕ್ಕೆ ಹೊಸತನವನ್ನು ತಂದವರು ಬೇಂದ್ರೆಯವರು ಎಂದು ಪ್ರಾಧ್ಯಾಪಕ ಡಾ. ಶಿವಪ್ಪ ಮುದಿಯಜ್ಜನವರ ತಿಳಿಸಿದರು.
ಸ್ಥಳೀಯ ಜ.ಫ. ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗದಗ ಹಾಗೂ ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಜರುಗಿದ ಅಯ್ಯಪ್ಪ ಸಜ್ಜನರ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅನೇಕ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಬೇಂದ್ರೆಯವರು ಗ್ರಾಮೀಣ ಸೊಗಡಿನ ಪದಪುಂಜಗಳನ್ನು ಬಳಸುವ ಮೂಲಕ ಶಬ್ದಗಾರುಡಿಗರಾಗಿದ್ದಾರೆ ಎಂದರು.ಪ್ರೊ. ಎಸ್.ಯು. ಸಜ್ಜನಶೆಟ್ಟರ ಅಯ್ಯಪ್ಪ ಸಜ್ಜನರ ಕುರಿತು ಮಾತನಾಡಿ, ಶಿಕ್ಷಣ ಪ್ರಸಾರದಲ್ಲಿ ಅದ್ವಿತೀಯ ಕೊಡುಗೆ ನೀಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಶಿಕ್ಷಣ ಸಂಸ್ಥೆ, ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿ ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಸಮಾಜಮುಖಿ, ಜನಪರ ಕಾರ್ಯದ ಮೂಲಕ ಅಯ್ಯಪ್ಪ ಸಜ್ಜನರ ಅಜರಾಮರರಾಗಿದ್ದಾರೆ ಎಂದರು.
ಪ್ರಾ. ಡಾ. ಉಮೇಶ ಅರಹುಣಸಿ ಮಾತನಾಡಿ, ಬೇಂದ್ರೆ ಅವರು ಕನ್ನಡ ಸಾಹಿತ್ಯದ ಆಸ್ತಿ. ಕವಿತೆ, ನಾಟಕ, ವಿಮರ್ಶೆ ಮತ್ತು ಅನುವಾದ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿ ಕನ್ನಡಿಗರಿಗೆ ಅತ್ಯಮೂಲ್ಯ ಕೃತಿಗಳನ್ನು ಬಿಟ್ಟುಹೋಗಿದ್ದಾರೆ. ನಾಕುತಂತಿಯ ಮೂಲಕ ದಾರ್ಶನಿಕ ವಿಚಾರಗಳನ್ನು ಹರಡಿದ್ದಾರೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಹಕಾರ್ಯದರ್ಶಿ ಸತೀಶ ಚನ್ನಪ್ಪಗೌಡರ ಮಾತನಾಡಿದರು. ಡಿ.ಎಸ್. ಬಾಪುರಿ, ಪೃಥ್ವಿರಾಜ.ಎನ್, ಡಾ. ಅನುಷಾ, ಡಾ. ಪರಶುರಾಮ ಬಾರಕೇರ, ಡಾ. ನಗೀನಾ ಎಸ್. ಸೇರಿ ಇತರರು ಇದ್ದರು. ಅಂಕಿತಾ ನಿರೂಪಿಸಿದರು. ಬಸಮ್ಮ ಸ್ವಾಗತಿಸಿದರು. ಶಶಿಕಲಾ ವಂದಿಸಿದರು.