ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಾಕುತಂತಿ ಕನ್ನಡ ಸಾಹಿತ್ಯ ಜಗತ್ತಿನ ಒಂದು ಮಹೋನ್ನತ ಕವಿತೆಯೆಂದರೇ ಅತಿಶಯೋಕ್ತಿಯಾಗಲಾರದು. ತಮ್ಮ ಭಾಷೆಯ ಮೂಲಕವೇ ಕೋಟ್ಯಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದ ದ.ರಾ.ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ ವರಕವಿಯೇ ಎಂದು ಹಿರಿಯ ಸಾಹಿತಿಗಳಾದ ಡಾ.ಶ್ಯಾಮಸುಂದರ ಬಿದರಕುಂದಿ ಹೇಳಿದರು.ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಚರಂತಿಮಠ ಬಾಗಲಕೋಟೆ ಸಹಯೋಗದಲ್ಲಿ ಜರುಗಿದ ಜ್ಞಾನಪೀಠ ಪುರಸ್ಕೃತ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆ 2ರಲ್ಲಿ ಜ್ಞಾನಪೀಠ ಪುರಸ್ಕೃತ ದ.ರಾ.ಬೇಂದ್ರೆಯವರ ನಾಕುತಂತಿ ಚಿಂತನಪರ ಭಾವಗೀತೆ ಕುರಿತು ಉಪನ್ಯಾಸ ನೀಡಿದ ಅವರು, ವರಕವಿ ಬೇಂದ್ರೆಯವರ ನಾಕುತಂತಿ ಆಧ್ಯಾತ್ಮಿಕ ನೆಲೆಯ ಒಂದು ನಿಗೂಢ ಕವನವಾಗಿದೆ. ಬೇಂದ್ರೆಯವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವಿರಾಟ್ ವೀಣೆ. ಆ ವೀಣೆಯ ನಾಲ್ಕು ತಂತಿಗಳೆಂದರೆ ನಾನು, ನೀನು, ಆನು, ತಾನು. ನಾನು ಪುರುಷ, ನೀನು ಸ್ತ್ರೀ, ಅವರ ಮಿಲನದ ಫಲವಾದ ಸಂತಾನವೇ ಈ ಆನು ಎಂಬ ತತ್ವ. ಈ ನಾನು, ನೀನು, ಆನುಗಳಿಗೆ ಆಧಾರವಾಗಿರುವುದೇ ಪರಾತ್ಪರ ಶಕ್ತಿಯಾದ ತಾನು. ವಿಶ್ವವೆಂಬ ವಿರಾಟ್ ವೀಣೆ ಈ ನಾಲ್ಕು ತತ್ವದಿಂದ ವಿಕಸನಗೊಂಡಿದೆ ಎಂಬುವುದು ಬೇಂದ್ರೆಯವರ ಆಧ್ಯಾತ್ಮಿಕ ದರ್ಶನವಾಗಿದೆ ಎಂದರು.ಬಿ.ವಿ.ವಿ ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚರಂತಿಮಠದ ಪೂಜ್ಯರ ಪ್ರೇರಣೆಯಂತೆ ಮಾಸಿಕ ಉಪನ್ಯಾಸ ಮಾಲೆ ನಿಜಕ್ಕೂ ಅರ್ಥಪೂರ್ಣವಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತ್ಯ ಸಂವಾದ ಜಿಲ್ಲೆಯ ಸಾಂಸ್ಕೃತಿಕ ಜಗತನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿರುವುದು ಶ್ಲಾಘನಿಯ ಎಂದರು.ಡಾ.ಎಂ.ನಂಜುಂಡಸ್ವಾಮಿ ಸ್ವಾಗತಿಸಿದರು. ಪ್ರಸ್ತಾವಿಕವಾಗಿ ಜಿ.ಐ.ನಂದಿಕೋಲಮಠ ಮಾತನಾಡಿದರು. ಡಾ.ಬಸವರಾಜ ಕೋತ ವಂದಿಸಿದರು. ಡಾ.ಐ.ಕೆ.ಮಠದ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರೇಯಾ ಜೋರಾಪುರ ಹಾಡಿದ ನಾಲ್ಕುತಂತಿಯ ಗೀತ ಗಾಯನ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಎ.ಎಸ್.ಪಾವಟೆ. ಎಸ್.ಆರ್.ಮನಹಳ್ಳಿ, ಬಸವರಾಜ ಭಗವತಿ. ಎಂ.ಸಿ.ಹಾಳವರ, ಎಸ್.ಜಿ.ಕೋಟಿ, ಡಾ.ಎಸ್.ಡಿ.ಕೆಂಗಲಗುತ್ತಿ, ಸೇರಿದಂತೆ ಅಕ್ಕನ ಬಳಗದ ಮಾತೆಯರು ಭಾಗವಹಿಸಿದ್ದರು. ಕವನದ ಮೂಲ ವಸ್ತುಗಳೆಂದರೆ ವಿಶ್ವ, ವೀಣೆ, ಅಧ್ಯಾತ್ಮ ಹಾಗೂ ತತ್ವಶಾಸ್ತ್ರ. ಸಾಮಾನ್ಯವಾಗಿ ವಿಶ್ವವೆಂದರೆ ಸಕಲ ಜೀವಚರ, ಗ್ರಹ, ಧಾತು ಮತ್ತು ಭೂಮ್ಯಾಕಾಶಗಳನ್ನೊಳಗೊಂಡ ಕೇಂದ್ರ ಬಿಂದು. ವೀಣೆ ಸಂಗೀತದ ಒಂದು ಉಪಕರಣ. ಸಮಸ್ತ ವಿಶ್ವವನ್ನು ವೀಣೆಗೆ ಹೋಲಿಸಿ, ಅದಕ್ಕಿರುವುದು ನಾನು,ನೀನು,ಆನು,ತಾನು ಎಂಬ ನಾಲ್ಕು ತಂತಿಗಳು ಎಂಬುದು ಬೇಂದ್ರೆಯವರ ಆಶಯ. ಒಟ್ಟಾರೆ ನಾಕುತಂತಿ ಕನ್ನಡ ಸಾಹಿತ್ಯ ಜಗತ್ತಿನ ಒಂದು ಮಹೋನ್ನತ ಕವಿತೆಯೆಂದರೆ ಅತಿಶಯೋಕ್ತಿಯಾಗಲಾರದು. ತಮ್ಮ ಭಾಷೆಯ ಮೂಲಕವೇ ಕೋಟ್ಯಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದ ದ.ರಾ.ಬೇಂದ್ರೇ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ ವರಕವಿಯೇ ಸರಿ.
-ಡಾ.ಶ್ಯಾಮಸುಂದರ ಬಿದರಕುಂದಿ, ಹಿರಿಯ ಸಾಹಿತಿ.