ಬೇಂದ್ರೆ ಕಾವ್ಯ ಭಾವ, ಕುರ್ತಕೋಟಿ ವಿಮರ್ಶೆ ಜ್ಞಾನ ಪ್ರಧಾನ

| Published : Oct 15 2025, 02:08 AM IST

ಸಾರಾಂಶ

ಸುಮಾರು ಐದು ದಶಕಗಳ ಕಾಲ ಕುರ್ತಕೋಟಿ ಅವರು ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಕುರಿತು ಬರೆದ ಕೃತಿ ಹಾಗೂ ಲೇಖನಗಳ ಸಮಗ್ರ ಕೃತಿಯೇ ವಾಗರ್ಥ.

ಧಾರವಾಡ:

.ರಾ. ಬೇಂದ್ರೆ ಅವರ ಕಾವ್ಯ ಭಾವ ಪ್ರಧಾನವಾದರೆ, ಕೀರ್ತಿನಾಥ ಕುರ್ತಕೋಟಿ ಅವರ ವಿಮರ್ಶೆ ಜ್ಞಾನ ಪ್ರಧಾನ ಎಂದು ಕೀರ್ತಿ ನೆನಪು ಸಂವಾದ ಕಾರ್ಯಕ್ರಮದಲ್ಲಿ ಚಿಂತಕ ಡಾ. ಶ್ರೀರಾಮ ಭಟ್ಟ ಹೇಳಿದರು.

ಕುರ್ತಕೋಟಿ ಅವರ 97ನೇ ಜನ್ಮ ದಿನದ ಅಂಗವಾಗಿ ವಾಗರ್ಥ ಕೃತಿ ಕುರಿತು ಸೋಮವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸುಮಾರು ಐದು ದಶಕಗಳ ಕಾಲ ಕುರ್ತಕೋಟಿ ಅವರು ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಕುರಿತು ಬರೆದ ಕೃತಿ ಹಾಗೂ ಲೇಖನಗಳ ಸಮಗ್ರ ಕೃತಿಯೇ ವಾಗರ್ಥಎಂದರು.

ಬೇಂದ್ರೆಯವರ ಕಾವ್ಯಕ್ಕೆ ಇರುವ ಮೌಲ್ಯವೇ ಕುರ್ತಕೋಟಿ ಅವರ ವಿಮರ್ಶೆಗಿದೆ. ಬೇಂದ್ರೆಯವರ ಕಾವ್ಯ ಅರ್ಥವಾಗ ಬೇಕಾದರೆ ಕುರ್ತಕೋಟಿ ವಿಮರ್ಶೆ ಓದಲೇಬೇಕು. ಮಾತು ಅರ್ಥದ ಅಭಿನ್ನತೆಯಿಂದ ಕೂಡಿದ್ದು ವಾಗರ್ಥ. ಕಾಳಿದಾಸನ ಈ ಶ್ಲೋಕ ಅದರಲ್ಲಿ ಬರುವ ವಾಗರ್ಥ ಎಂಬ ಶಬ್ದ ಬೇಂದ್ರೆ ಕಾವ್ಯಕ್ಕೆ ಕುರ್ತಕೋಟಿ ಅವರ ವಿಮರ್ಶೆಗೆ ಹೇಗೆ ಸಂಯೋಜಿತವಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ಡಾ. ಶ್ರೀರಾಮ ಭಟ್ಟ ತಿಳಿಸಿದರು.

ಕನ್ನಡ ಕಾವ್ಯ ಪರಂಪರೆಗೆ ಬೇಂದ್ರೆ ಹಾಗೂ ಕುರ್ತಕೋಟಿ ಅವರು ಕೊಟ್ಟ ಕೊಡುಗೆ ಅಪಾರವಾದದ್ದು. ಬೇಂದ್ರೆ ಕಾವ್ಯಕ್ಕೆ ವಿಮರ್ಶೆ ಬರೆಯಲಂದೆ ಬಂದವರು ಅವರು ಎಂದು ಒಂದು ಪದ್ಯದ ಮೂಲಕ ವಿವರಿಸಿದರು. ಬೇಂದ್ರೆ ಕವಿತ್ವವನ್ನು ತಮ್ಮ ಬರಹದ ಮೂಲಕ ಕನ್ನಡ ವಿಮರ್ಶೆಯನ್ನು ಶ್ರೀಮಂತಗೊಳಿಸಿದವರು ಕುರ್ತಕೋಟಿ. ಅವರ ವಾಗರ್ಥ ಅನೇಕ ಹೊಸ ವಿಷಯ ವಿಚಾರಗಳಿಂದ ಕೂಡಿದ್ದು ಎಂದು ಡಾ. ಶ್ಯಾಮಸುಂದರ ಬಿದರಕುಂದಿ ಸಂವಾದದಲ್ಲಿ ಪ್ರತಿಪಾದಿಸಿದರು.

ಬೇಂದ್ರೆ ಕಾವ್ಯ ಹಾಗೂ ಕುರ್ತಕೋಟಿ ಅವರ ವಿಮರ್ಶೆ ಇಂಗ್ಲಿಷ್ ಸಾಹಿತ್ಯದ ಇಂಬನ್ನು ಪಡೆದ ಬಗೆಯ ಬಗ್ಗೆ ಡಾ. ವಿನಾಯಕ ನಾಯಕರು ಸೋದಾಹರಣದ ಮೂಲಕ ವಿವರಿಸಿದರು. ಬೇಂದ್ರೆ ಕಾವ್ಯ ಮತ್ತು ಕುರ್ತಕೋಟಿ ಅವರ ವಿಮರ್ಶೆ ವಾಗರ್ಥದ ಬಂಧಕ್ಕೆ ಹೇಗೆ ಸ್ವರೂಪಿಸಿಕೊಳ್ಳುತ್ತದೆ. ಈ ಕೃತಿಯ ಶಿರೋನಾಮೆ ವಾಗರ್ಥವೇ ಏಕೆ? ಕಾವ್ಯ ಹೇಗೆ ವಾಕ್ ವಿಮರ್ಶೆ ಹೇಗೆ ಅರ್ಥ. ಅವೆರಡರ ಸಂಬಂಧ ಮತ್ತು ಸಂಯೋಜನೆ ಕುರಿತು ಡಾ. ಕೃಷ್ಣ ಕಟ್ಟಿ ವಿಷಯ ಪ್ರತಿಪಾದಿಸಿದರು.

ಮನೋಹರ ಗ್ರಂಥಮಾಲೆ ಮತ್ತು ಕುರ್ತಕೋಟಿ ಟ್ರಸ್ಟ್ ಈ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ನಗರದ ಹಿರಿಯ ಸಾಹಿತಿಗಳು, ಚಿಂತಕರು ಇದರಲ್ಲಿ ಪಾಲ್ಗೊಂಡಿದ್ದರು. ಜಯತೀರ್ಥ ಜಹಗಿರದಾರ ವಂದಿಸಿದರು.