ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ, ಸದಸ್ಯರ ಪದಗ್ರಹಣ

| Published : Aug 22 2025, 01:00 AM IST

ಸಾರಾಂಶ

ಬೇಂದ್ರೆಯವರ ಕಾವ್ಯವನ್ನು ಓದುತ್ತಾ, ನೋಡುತ್ತ, ಕಾವ್ಯಗಳ ಕುರಿತು ಚರ್ಚೆ ಮಾಡುತ್ತ ಬೆಳೆದ ನಾನು ಅವರ ಹೆಸರಿನ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷನಾಗಿ ನೇಮಕವಾಗಿರುವುದು ಸಂತೋಷವಾಗಿದೆ.

ಧಾರವಾಡ: ಇಲ್ಲಿಯ ಡಾ. ದ.ರಾ. ಬೇಂದ್ರೆ ಭವನದಲ್ಲಿ ಗುರುವಾರ ಬೇಂದ್ರೆ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಡಾ. ಸರಜೂ ಕಾಟ್ಕರ್ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಬೇಂದ್ರೆಯವರ ಕಾವ್ಯವನ್ನು ಓದುತ್ತಾ, ನೋಡುತ್ತ, ಕಾವ್ಯಗಳ ಕುರಿತು ಚರ್ಚೆ ಮಾಡುತ್ತ ಬೆಳೆದ ನಾನು ಅವರ ಹೆಸರಿನ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷನಾಗಿ ನೇಮಕವಾಗಿರುವುದು ಸಂತೋಷವಾಗಿದೆ. ಬೇಂದ್ರೆ ಯಾವುದೇ ಒಂದು ಪ್ರದೇಶಕ್ಕೆ ಸೀಮಿತರಲ್ಲ, ಅವರೊಬ್ಬ ಇಡೀ ನಾಡಿನ, ದೇಶದ ಮತ್ತು ವಿಶ್ವಕವಿಯಾಗಿದ್ದಾರೆ. ಬೇಂದ್ರೆ, ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ. ಬೇಂದ್ರೆಯವರ ಅನೇಕ ಕವಿತೆಗಳನ್ನು ಗಮನಿಸಿದಾಗ ಅದರಲ್ಲಿ ರಾಷ್ಟ್ರಪ್ರೇಮ, ನಾಡಪ್ರೇಮ, ಪ್ರಕೃತಿ, ನಿಸರ್ಗ ಪ್ರೇಮ ಓತಪ್ರೇತವಾಗಿ ಹರಿಸಿದ್ದಾರೆ ಎಂದರು.

ಶ್ರಾವಣ ಮಾಸದಲ್ಲಿಯೇ ಬೇಂದ್ರೆ ಟ್ರಸ್ಟ್‌ ಅಧ್ಯಕ್ಷನಾಗುವ ಅವಕಾಶ ಬಂದಿರುವುದು ಸುದೈವ. ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಬಂದು ಸುವರ್ಣ ಸಂಭ್ರಮದ ಸಂದರ್ಭವೂ ಇದಾಗಿದೆ. ಮುಂದಿನ ದಿನಗಳಲ್ಲಿ ಈ ಸಂಭ್ರಮದ ಕುರಿತು ರಾಜ್ಯಮಟ್ಟದಲ್ಲಿ ಮತ್ತು ವಿಭಾಗ ಮಟ್ಟದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸುವುದರ ಕುರಿತು ಆಲೋಚನೆ ಮಾಡುವುದಾಗಿ ತಿಳಿಸಿದರು.

ಕುಮಾರ ಬೆಕ್ಕೇರಿ ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಡಾ. ವೈ.ಎಂ. ಯಾಕೋಳ್ಳಿ, ಡಾ. ಶಿಲಾಧರ ಮುಗಳಿ, ಡಾ. ಶರಣಮ್ಮ ಗೋರೆಬಾಳ, ಪ್ರಭು ಕುಂದರಗಿ, ಪುನರ್ವಸು ಬೇಂದ್ರೆ ಹಾಗೂ ಇಮಾಮಸಾಬ ವಲ್ಲೆಪ್ಪನವರ ಸದಸ್ಯರಾಗಿ ಪದಗ್ರಹಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಇದ್ದರು.