ಅಫಜಲ್ಪುರ ತಾಲೂಕಿನ ರೈತರ ಖಾತೆಗೆ ಸರ್ಕಾರ ಜಮಾ ಮಾಡಿರುವ ಪರಿಹಾರದ ಹಣ ನಮ್ಮ ಕೈಗೆ ಸಿಗುತ್ತಿಲ್ಲವೆಂದು ರೈತರು, ರೈತ ಮಹಿಳೆಯರು ನಿತ್ಯ ತಹಸೀಲ್ದಾರ್‌ ಕಚೇರಿಗೆ ಅಲೇದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಬರಪೀಡಿತ ತಾಲೂಕಿನ ಪಟ್ಟಿಯಲ್ಲಿರುವ ಅಫಜಲ್ಪುರ ತಾಲೂಕಿನ ರೈತರ ಖಾತೆಗೆ ಸರ್ಕಾರ ಜಮಾ ಮಾಡಿರುವ ಪರಿಹಾರದ ಹಣ ನಮ್ಮ ಕೈಗೆ ಸಿಗುತ್ತಿಲ್ಲವೆಂದು ರೈತರು, ರೈತ ಮಹಿಳೆಯರು ನಿತ್ಯ ತಹಸೀಲ್ದಾರ್‌ ಕಚೇರಿಗೆ ಅಲೇದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ತಹಸೀಲ್ದಾರ್‌ ಕಚೇರಿಗೆ ಆಗಮಿಸಿದ್ದ ತಾಲೂಕಿನ ಬಳೂರ್ಗಿ ಗ್ರಾಮದ ರತ್ನಾಬಾಯಿ ಎನ್ನುವ ಹಿರಿಯ ಮಹಿಳೆ ನಮ್ಮ ಖಾತೆಗೆ ಬರ ಪರಿಹಾರದ ಹಣ ಜಮಾ ಆಗುತ್ತಿಲ್ಲ. ಊರಲ್ಲಿನ ಗ್ರಾಮ ಒನ್ ಕೇಂದ್ರದಲ್ಲಿ ಕೇಳಿದರೆ ಜಮಾ ಆಗಿವೆ ಎನ್ನುತ್ತಾರೆ. ಆದರೆ ಅಕೌಂಟ್ ಚೆಕ್ ಮಾಡಿದರೆ ಹಣವಿಲ್ಲ. ನಾವು ಯಾರಿಗೆ ಕೇಳಬೇಕೆಂದು ತಿಳಿಯದಿದ್ದಾಗ ಅಫಜಲ್ಪುರ ತಹಸೀಲ್ದಾರ್‌ ಕಚೇರಿಯಲ್ಲಿ ಸಹಾಯವಾಣಿ ತೆರೆದಿದ್ದಾರೆ ಎಂದು ತಿಳಿದು ಇಲ್ಲಿಗೆ ಬಂದಿದ್ದೇವೆ ಎಂದು ಅಳಲು ತೋಡಿಕೊಂಡರು.

ತಹಸೀಲ್ ಕಚೇರಿ ಮುಖ್ಯದ್ವಾರದ ಬಳಿ ಕುಳಿತಿದ್ದ ಇನ್ನೊಂದಿಷ್ಟು ಹಿರಿಯ ಜೀವಗಳು ತಮ್ಮ ಖಾತೆಯಲ್ಲಿನ ವೃದ್ದಾಪ್ಯ ವೇತನ, ವಿಧವಾ ವೇತನ, ಗೃಹಲಕ್ಷ್ಮೀ ಸೇರಿದಂತೆ ಸರ್ಕಾರದಿಂದ ಬರುತ್ತಿರುವ ಧನಸಹಾಯದ ಹಣವೆಲ್ಲಾ ಹಳೆಯ ಸಾಲಕ್ಕೆ ಕಡಿತ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಮ್ಮ ಬದುಕು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಬರಗಾಲದಿಂದ ಕಂಗೆಟ್ಟಿರುವ ನಮಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಕೂಡಲೇ ನಮ್ಮ ಖಾತೆಗೆ ಬರುವ ಹಣ ಯಾವುದೇ ಸಾಲಕ್ಕೆ ಕಡಿತ ಮಾಡಿಕೊಳ್ಳದೆ ನಮ್ಮ ಕಷ್ಟಕ್ಕೆ ಆಗುವಂತೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿಕೊಂಡಿದ್ದಾರೆ.