4.20 ಕೋಟಿ ಜನರಿಗೆ ಗ್ಯಾರಂಟಿಗಳ ಪ್ರಯೋಜನ

| Published : Oct 03 2024, 01:25 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 4.20 ಕೋಟಿ ಜನರು ಪ್ರಯೋಜನ ಪಡೆದು ಉತ್ತಮ ಜೀವನ ನಡೆಸುತ್ತಿದ್ಧಾರೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 4.20 ಕೋಟಿ ಜನರು ಪ್ರಯೋಜನ ಪಡೆದು ಉತ್ತಮ ಜೀವನ ನಡೆಸುತ್ತಿದ್ಧಾರೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿ ಕಟ್ಟಡದಲ್ಲಿ ಜಿಪಂ, ತಾಪಂ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಂತರು ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಬಡವರು, ಮಧ್ಯಮ‌ ವರ್ಗದವರು ಪಡೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲ ಜನರು ಉತ್ತಮ ಜೀವನ ನಡೆಸಬೇಕೆಂಬ ಸಂವಿಧಾನದ ಆಶಯದಂತೆ ನಮ್ಮ ಸರ್ಕಾರ ಈ ಯೋಜನೆಗಳನ್ನು ಜಾರಿ ತರುವ ಮೂಲಕ ರಾಜ್ಯದ ಮಹಿಳೆಯರಿಗೆ, ನಿರುದ್ಯೋಗ ಯುವಕರಿಗೆ ಆರ್ಥಿಕ ಸಹಾಯ ಮಾಡಿದೆ. ಸಮಿತಿಯ ಅಧ್ಯಕ್ಷರು, ಸದಸ್ಯರು ಜನರಿಗೆ ಈ ಯೋಜನೆಗಳು ಮುಟ್ಟುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ತಂದ ಕೀರ್ತಿ ತಮಿಳುನಾಡಿಗೆ ಸಲ್ಲುತ್ತದೆ. ನಮ್ಮದು ಎರಡನೇ ರಾಜ್ಯ. ಈ ಯೋಜನೆಗಳು ದುರುಪಯೋಗವಾಗಬಾರದು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಇಲಿಯಾಸ್‌ ಅಹ್ಮದ ಬೊರಮನಿ ಮಾತನಾಡಿ, ಈ ಯೋಜನೆಗಳಿಂದ ಜಿಲ್ಲೆಗೆ ₹ 1800 ಕೋಟಿ ಬಂದಿದೆ. ಈ ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಒಟ್ಟು 41,134 ಅರ್ಜಿಗಳು ಬಂದಿದ್ದು, ಇದರಲ್ಲಿ 3,200 ಅರ್ಜಿಗಳು ತಾಂತ್ರಿಕ ತೊಂದರೆಯಿಂದ ಉಳಿದುಕೊಂಡಿವೆ. ಮುಂದಿನ ದಿನಗಳಲ್ಲಿ ಇವರಿಗೂ ಅನುಕೂಲವಾಗುವಂತೆ ತಾಲೂಕು ಸಮಿತಿ ಕ್ರಮ ತೆಗೆದುಕೊಳ್ಳಬೇಕೆಂದರು.

ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ ಮಾತನಾಡಿ, ಸಂವಿಧಾನದ ಕಲಂ 39, 46 ಅಡಿಯಲ್ಲಿ ಹೇಳಿರುವಂತೆ ದೇಶದ‌ ಎಲ್ಲ ಜನತೆಗೆ ಕನಿಷ್ಠ ಆದಾಯ ಇದ್ದು ಉತ್ತಮ ಜೀವನ ಮಾಡಬೇಕೆಂದು ಸೂಚಿಸುತ್ತದೆ. ಅದರಂತೆ ನಮ್ಮ ಸರ್ಕಾರ ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇವು ಬಿಟ್ಟಿ ಭಾಗ್ಯಗಳಲ್ಲ, ಜನರ ಹಕ್ಕಾಗಿವೆ. ಇವು ಜನಪರ ಯೋಜನೆಗಳಾಗಿದ್ದು, ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಡಿಸಿಸಿ ಬಾಂಕ್‌ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಮುಖಂಡರಾದ ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ಮಹಿಳಾ ಬ್ಲಾಕ್ ಅಧ್ಯಕ್ಷೆ ರುಕ್ಮಿಣಿ ರಾಠೋಡ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಅನಿಲ ಅಗರವಾಲ, ಬಸಣ್ಣ ದೇಸಾಯಿ, ಶೇಖರ ಗೊಳಸಂಗಿ, ರವಿ ರಾಠೋಡ, ಪ್ರೇಮಕುಮಾರ ಮ್ಯಾಗೇರಿ ಇದ್ದರು. ತಾಪಂ ಇಒ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಾಶ ದೇಸಾಯಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವು ಹೆರಕಲ್‌ ಪ್ರಾರ್ಥಿಸಿದರು, ಶಶಿಧರ ಪಾಟೀಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಪೋಟೋ: ಬಸವನಬಾಗೇವಾಡಿ ತಾಲೂಕು ಪಂಚಾಯತಿಯ ಕಟ್ಟಡದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಕಾರ್ಯಾಲಯ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.-----------

ಕೋಟ್‌

ರಾಜ್ಯದ ಎಲ್ಲ ಜನರಿಗೂ ಪಂಚ ಗ್ಯಾರಂಟಿ ಯೋಜನೆಗಳು ತಲುಪುವಂತೆ ಮಾಡುತ್ತಿದೆ. ಕೆಲವರು ವಿನಾಕಾರಣ ಟೀಕೆ ಮಾಡುತ್ತಾರೆ. ಅವರು ಟೀಕೆ ಮಾಡಿದರೂ ಈ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಎಲ್ಲ ಯೋಜನೆಗಳು ವ್ಯವಸ್ಥೆ ನಿರ್ವಹಣೆ ಮಾಡಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಜ್ಯ ಸಮಿತಿ ರಾಜ್ಯ, ಜಿಲ್ಲಾ, ತಾಲೂಕು ಹಂತಗಳಲ್ಲಿ ಕಾರ್ಯನಿರ್ವಸುತ್ತಿವೆ.

- ಶಿವಾನಂದ ಪಾಟೀಲ, ಸಚಿವ