ಕೃಷಿ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಹಾಗೂ ಹೊಸ ತಳಿಗಳ ಅಭಿವೃದ್ಧಿ ನಡೆಯುತ್ತಿದ್ದು, ಇದರ ಮಾಹಿತಿಯನ್ನು ರೈತರಿಗೆ ತಲುಪಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ. ರಮೇಶ್ ಹೇಳಿದರು.
ಮಂಗಳೂರು: ಕೃಷಿ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಹಾಗೂ ಹೊಸ ತಳಿಗಳ ಅಭಿವೃದ್ಧಿ ನಡೆಯುತ್ತಿದ್ದು, ಇದರ ಮಾಹಿತಿಯನ್ನು ರೈತರಿಗೆ ತಲುಪಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ. ರಮೇಶ್ ಹೇಳಿದರು.
ಅವರು ಸೋಮವಾರ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೀದರ್, ಕೃಷಿ ವಿಜ್ಞಾನ ಕೇಂದ್ರ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಸಖಿಯರಿಗೆ 6 ದಿನದ ಸಾಂಸ್ಥಿಕ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿ ಕ್ಷೇತ್ರದಲ್ಲಿ ರೈತರ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಒದಗಿಸಲು ಆಧುನಿಕ ಕೃಷಿ ಯಂತ್ರೋಪಕರಣಗಳ ಪರಿಚಯಿಸುವಿಕೆ, ಭತ್ತ ಹಾಗೂ ವಿವಿಧ ಸುಧಾರಿತ ಬೇಸಾಯ ಕ್ರಮಗಳ ಮಾಹಿತಿ ನೀಡುವುದು ಸೇರಿದಂತೆ ರೈತರಿಗೆ ಆಗ್ಗಿಂದಾಗೆ ಮಾಹಿತಿ ದೊರೆತರೆ ಕೃಷಿ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಪ್ರಯೋಜನವಾಗಲಿದೆ. ಭತ್ತ ಹಾಗೂ ತರಕಾರಿ ಬೆಳೆಗಳಲ್ಲಿ ಕಂಡುಬರುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ, ಮಣ್ಣಿನ ನಿರ್ವಹಣೆ, ಗೊಬ್ಬರದ ಬಳಕೆ ಕುರಿತು ತರಬೇತಿ ನೀಡಲಾಗುವುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮಾತನಾಡಿ, ಕೃಷಿ ಇಲಾಖೆ ಮತ್ತು ರೈತರ ಮಧ್ಯೆ ಕೊಂಡಿಯಾಗಿರುವ ಕೃಷಿ ಸಖಿಯರಿಗೆ ತರಬೇತಿ ನೀಡುವುದು ಶ್ಲಾಘನೀಯ. ಕೃಷಿ ಸಂಶೋಧನೆಯ ಲಾಭ ರೈತರಿಗೆ ದೊರೆಯಬೇಕು. ಇದರ ಅಂತಿಮ ಲಾಭ ಕೃಷಿ ಭೂಮಿಯಲ್ಲಿ ಪ್ರತಿಫಲನವಾಗಬೇಕು ಎಂದರು.ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೇದರನಾಥ, ಡಾ.ಧರಣೇಶ ಎನ್.ಕೆ. ಇದ್ದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ರಶ್ಮಿ ಆರ್.ಸ್ವಾಗತಿಸಿದರು. ಬೇಸಾಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಹರೀಶ್ ಶೆಣೈ ವಂದಿಸಿದರು. ಡಾ.ಮಲ್ಲಿಕಾರ್ಜುನ್ ನಿರೂಪಿಸಿದರು.6 ದಿನಗಳ ತರಬೇತಿ ಶಿಬಿರದಲ್ಲಿ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನ 50 ಕೃಷಿ ಸಖಿಯರು ಭಾಗವಹಿಸಿದ್ದಾರೆ.