ಸಾರಾಂಶ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದರೈತ ಬಂಡಾಯದ ನೆಲ ನರಗುಂದ ತಾಲೂಕಿನಲ್ಲಿ ಸದ್ಯ ಕಡಲೆಕಾಳು ಸುಗ್ಗಿಯಲ್ಲಿ ಬೆಳೆಗಾರರು ನಿರತರಾಗಿದ್ದು, ಎಪಿಎಂಸಿಯಲ್ಲಿ ಮೂರ್ನಾಲ್ಕು ದಿನಗಳಿಂದ ಕಡಲೆ ಬೆಳೆ ಬೆಲೆ ಕ್ವಿಂಟಲ್‌ಗೆ ಎರಡ್ಮೂರು ನೂರು ರು. ಕುಸಿದಿರುವುದು ಆತಂಕ ಮೂಡಿಸಿದೆ.
ಪ್ರತಿ ವರ್ಷದಂತೆ ಇಲ್ಲಿಯ ಎಪಿಎಂಸಿಗೆ ಕಡಲೆಕಾಳು ಆವಕ ಡಿಸೆಂಬರ್‌ನಲ್ಲಿ ಶುರುವಾಗಿದೆ. ಆರಂಭದಲ್ಲಿ ಕ್ವಿಂಟಲ್‌ಗೆ ₹ 6800ರಿಂದ 7200 ವರೆಗೆ ಮಾರಾಟವಾಗಿದೆ. ಬೇಗ ಬಿತ್ತನೆ ಮಾಡಿದವರು ಈ ದರ ಪಡೆದುಕೊಂಡಿದ್ದು ನಂಬಿಕೆಟ್ಟವರಿಲ್ಲವೋ ಮಣ್ಣನ್ನು ಎಂದು ಖುಷಿ ಖುಷಿಯಾಗಿದ್ದಾರೆ.ಡಿಸೆಂಬರ್‌ನಲ್ಲಿ ಎಪಿಎಂಸಿಗೆ 7115 ಕ್ವಿಂಟಲ್ ಕಡಲೆಕಾಳು ಆವಕವಾಗಿದೆ. ಈ ಮಾಸದಲ್ಲಿ ಗರಿಷ್ಠ 7400 ರು.ವರೆಗೂ ಮಾರಾಟವಾಗಿದೆ. ಮಾದರಿ ದರವೇ 6300 ರು. ಇರುವುದು ವಿಶೇಷ. ಜನವರಿಯಲ್ಲಿ ಒಂದು ದಿನ ಮಾತ್ರ 6900 ರು.ಗೆ ಮಾರಾಟವಾಗಿದ್ದು, ಬಳಿಕ ಒಂದು ದಿನ 6800 ರು.ಗೆ. ಮಾರಾಟವಾಗಿದ್ದು, ಉಳಿದ ದಿನಗಳಲ್ಲಿ 6400ರ ಗಡಿ ದಾಟಿ ಹೋಗಿಲ್ಲ. ಇದೇ ತಿಂಗಳಲ್ಲಿ 4705 ಕ್ವಿಂಟಲ್ ಕಡಲೆಕಾಳು ಆವಕವಾಗಿದೆ.
ಫೆಬ್ರವರಿಯಲ್ಲಿ ಭರ್ಜರಿ ಸುಗ್ಗಿ ಆರಂಭವಾಗಿದ್ದು, ರು. 6100ರಿಂದ 6200 ರು.ದಲ್ಲಿ ಹೆಚ್ಚಿನ ಉತ್ಪನ್ನ ಮಾರಾಟವಾಗಿದ್ದು, ಮಾಸಾಂತ್ಯಕ್ಕೆ ಅಂದರೆ ಎರಡ್ಮೂರು ದಿನಗಳಿಂದ 5400ರಿಂದ 5600 ರು.ಗೆ ಮಾರಾಟವಾಗಿದ್ದು, ಬೆಲೆ ಕುಸಿತ ರೈತರನ್ನು ಮತ್ತಷ್ಟು ಕಂಗೆಡಿಸಿದೆ.ಅಲ್ಪಸ್ವಲ್ಪ ಬೆಳೆ: 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ವಿಪರೀತ ಮಳೆಯಾಗಿದ್ದರಿಂದ ರೈತರು ಜಮೀನು ಸ್ವಚ್ಛ ಮಾಡಿ ಬಿತ್ತನೆ ಮಾಡಿದ್ದರು. ಬೆಳೆಗೆ ತೇವಾಂಶ ಕೊರತೆಯಿಂದ ಈ ವರ್ಷ ಅಲ್ಪಸ್ವಲ್ಪ ಬೆಳೆ ಬಂದಿದೆ. ಬಂದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಕೊರಗಾಗಿದೆ. ಪ್ರತಿ ವರ್ಷ ಈ ತಾಲೂಕಿನಲ್ಲಿ ರೈತರು ಬೆಳೆ ಕಟಾವಿಗೆ ಮುನ್ನ ಮಾರುಕಟ್ಟೆಯಲ್ಲಿ ಈ ಬೆಳೆಗೆ ಉತ್ತಮ ಬೆಳೆ ಇರುತ್ತದೆ. ಆದರೆ ರೈತರು ಕಡಲೆ ಕಟಾವು ಮಾಡಿ ಮಾರುಕಟ್ಟೆಗೆ ತರಲು ಪ್ರಾರಂಭ ಮಾಡಿದ ನಂತರ ವ್ಯಾಪಾರಸ್ಥರು ದಿಢೀರ್ ಬೆಲೆ ಕಡಿಮೆ ಮಾಡುತ್ತಾರೆ ಎಂಬುದು ಬೆಳೆಗಾರರ ಆರೋಪವಾಗಿದೆ.
ಜಿಲ್ಲೆ ಮತ್ತು ತಾಲೂಕಿನಲ್ಲಿ ವ್ಯಾಪಾರಸ್ಥರು ಉದ್ದೇಶ ಪೂರ್ವಕವಾಗಿ ಬೆಲೆಯನ್ನು ದಿಢೀರ್ ಕಡಿಮೆ ಮಾಡಿ, ರೈತರ ಬೆಳೆಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮುಂದೆ ಸ್ವಲ್ಪ ದಿವಸ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ತಾಲೂಕಿನಲ್ಲಿ ನಡೆದಿದೆ ಎಂದು ಜಿಲ್ಲಾ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಹೇಳಿದರು.ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಕಡಲೆ ಮಾರಾಟಕ್ಕೆ ಬರುತ್ತಿದ್ದು, ಖರೀದಿದಾರರು ಕಡಿಮೆ ಇದ್ದಾರೆ. ಬೆಲೆ ಕಡಿಮೆ ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆ ಇದೆ ಎಂದು ನರಗುಂದ ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಹೇಳಿದರು.