ಮಂಗಳೂರು ದಸರಾ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇಗುಲ ಸಂಪರ್ಕ ರಸ್ತೆಯಲ್ಲಿ ಬೆಂಗಾಳಿ ಕಲೆಯ ‘ಅಲ್ಫನಾ’ ಚಿತ್ತಾರ ನೋಡುಗರ ಕಣ್ಮನ ಸೆಳೆಯುತ್ತಿದೆ.
ಮಂಗಳೂರು ; ಮಂಗಳೂರು ದಸರಾ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇಗುಲ ಸಂಪರ್ಕ ರಸ್ತೆಯಲ್ಲಿ ಬೆಂಗಾಳಿ ಕಲೆಯ ‘ಅಲ್ಫನಾ’ ಚಿತ್ತಾರ ನೋಡುಗರ ಕಣ್ಮನ ಸೆಳೆಯುತ್ತಿದೆ.ದಸರಾ ಅಂಗವಾಗಿ ಈಗಾಗಲೇ ಕ್ಷೇತ್ರ ಹಾಗೂ ನಗರವನ್ನು ವಿದ್ಯುತ್ ದೀವಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆ ಕಂಗೊಳಿಸುತ್ತಿದೆ. ಇದೀಗ ಕ್ಷೇತ್ರದ ರಸ್ತೆಯಲ್ಲಿ ಮಠದಕಣಿಯ ಪಿಕ್ಸಿನ್ಸಿಲ್ ಕಲಾ ಸಂಸ್ಥೆಯ ಪ್ರಥ್ವಿ ಅವರ 10-12 ಮಂದಿಯ ತಂಡದವರು ‘ಅಲ್ಫನಾ’ ಬಣ್ಣದ ಚಿತ್ತಾರವನ್ನು ಕುದ್ರೋಳಿ ದೇಗುಲದಿಂದ ದ್ವಾರದವರೆಗಿನ ರಸ್ತೆಯ ಉದ್ದಕ್ಕೂ ಬಿಡಿಸಿ ಮೆರುಗು ತಂದಿದ್ದಾರೆ. ಬಗೆಬಗೆಯ ಪೈಂಟ್‌ಗಳನ್ನು ಮಿಶ್ರಣ ಮಾಡಿ ಬ್ರಷ್‌ಗಳ ಮೂಲಕ ಡಾಮರು ರಸ್ತೆಯ ಮೇಲೆ ಚಿತ್ರ ಬಿಡಿಸಲಾಗಿದೆ. ಧ್ವಜ, ಪತಾಕೆಗಳ ಹಾರಾಟ, ಝಗಮಗಿಸುವ ವಿದ್ಯುದ್ದೀಪಾಲಂಕಾರಗಳ ಮಧ್ಯೆ ‘ಅಲ್ಫನಾ’ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಹೂವು, ಶಂಖ, ಎಲೆ ಮೊದಲಾದ ಆಕಾರವನ್ನು ರಚಿಸಿ ಬಣ್ಣ ಹಚ್ಚಿ ಚಿತ್ರ ಬಿಡಿಸಲಾಗಿದೆ.ಬಂಗಾಲ ರಾಜ್ಯದ ಸಾಂಪ್ರದಾಯಿಕ ಜನಪದ ಕಲೆಯೇ ‘ಅಲ್ಫನಾ’. ನಮ್ಮ ಕರ್ನಾಟಕದಲ್ಲಿ ಮನೆ ಮುಂದೆ, ಧಾರ್ಮಿಕ, ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಿಡಿಸುವ ‘ರಂಗೋಲಿ’ ಕಲೆಯಂಥಹದ್ದೇ ಚಿತ್ತಾರ ‘ಅಲ್ಫನಾ’ ಆಗಿದೆ.
-------