ಸಾರಾಂಶ
- ರಾಜ್ಯಾದ್ಯಂತ ಬಿಸಿಯೂಟ ಸೇವೆ ಸ್ಥಗಿತಗೊಳಿಸಿ ಲಕ್ಷಾಂತರ ಮಹಿಳೆಯರಿಂದ ಅಹೋರಾತ್ರಿ ಧರಣಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಬಿಸಿಯೂಟ ತಯಾರಕರ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ರಾಜ್ಯ ಸಮಿತಿಯಿಂದ ಮಾ.5ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಭರವಸೆಯಂತೆ 6ನೇ ಗ್ಯಾರಂಟಿ ಯೋಜನೆಯಾಗಿ ಬಿಸಿಯೂಟ ತಯಾರಕರ ಸೇವೆ ಕಾಯಂಗೊಳಿಸಬೇಕು. ಬಿಸಿಯೂಟ ಯೋಜನೆ ಎಂಬುದನ್ನು ಕೈಬಿಟ್ಟು, ಕೆಲಸ ಮಾಡುತ್ತಿರುವ ಮಹಿಳೆಯರನ್ನು ಕಾರ್ಮಿಕರೆಂದು ಪರಿಗಣಿಸಿ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಬೆಂಗಳೂರು ಚಲೋ ಹೋರಾಟ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಬೆಂಗಳೂರು ಚಲೋ ಹಿನ್ನೆಲೆಯಲ್ಲಿ ಮಾ.5ರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕೆಲಸ ಸ್ಥಗಿತಗೊಳಿಸಿ, ರಾಜ್ಯದ ವಿವಿಧೆಡೆಯಿಂದ ಬಿಸಿಯೂಟ ತಯಾರಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಅವಧಿವರೆಗಿನ ಹೋರಾಟದಲ್ಲಿ ಭಾಗವಹಿಸುವರು. 23 ವರ್ಷಗಳಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 1.18 ಲಕ್ಷ ಮಹಿಳೆಯರು ಸೌಲಭ್ಯಗಳಿಂದಲೇ ವಂಚಿತರಾಗಿದ್ದಾರೆ ಎಂದು ದೂರಿದರು.ಹಿಂದಿನ ಸರ್ಕಾರ 2023- 2024ರ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ₹1 ಸಾವಿರ ವೇತನ ಘೋಷಿಸಿದ್ದನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರ ಜಾರಿಗೊಳಿಸಲಿಲ್ಲ. ಕೇಂದ್ರ ಸರ್ಕಾರವೂ ದುಡಿಯುವ ಮಹಿಳೆಯರಾದ ಬಿಸಿಯೂಟ ತಯಾರಕರನ್ನು ಕಡೆಗಣಿಸಿದೆ. ಬಿಸಿಯೂಟದ ಮುಖ್ಯ ಅಡುಗೆಯವರಿಗೆ ₹3700, ಸಹಾಯಕ ಅಡುಗೆಯವರಿಗೆ ₹3600 ಗೌರವಧನ ಮಾತ್ರವೇ ಸರ್ಕಾರ ನೀಡುತ್ತಿದೆ. ಇಷ್ಟು ಅತ್ಯಲ್ಪ ವೇತನದಲ್ಲಿ ಬಿಸಿಯೂಟ ತಯಾರಕರು ಜೀವನ ನಿರ್ವಹಿಸುವುದೇ ಕಷ್ಟವಾಗಿದೆ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳು ಬಿಸಿಯೂಟದ ಮಹಿಳೆಯರನ್ನು ಸಂಪೂರ್ಣವಾಗಿ ಕಡಗಣಿಸುತ್ತಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿ, ಸೇವೆ ಕಾಯಂಗೊಳಿಸಬೇಕು, ಪಿಎಫ್, ಇಎಸ್‌ಐ, ಗ್ರಾಚ್ಯುಟಿ ಯೋಜನೆ ಜಾರಿ, ಮರಣ ಹೊಂದಿದರೆ ₹10 ಲಕ್ಷ ಪರಿಹಾರ, ನಿವೃತ್ತರಿಗೆ ₹2 ಲಕ್ಷ ಇಡುಗಂಟು, ಪಿಂಚಣಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು, ಮಾ.5ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಚಂದ್ರು ತಿಳಿಸಿದರು.ಸಂಘಟನೆ ಮುಖಂಡರಾದ ಮಹಮ್ಮದ್ ಬಾಷಾ ಜಗಳೂರು, ಮಹಮ್ಮದ್ ರಫೀಕ್, ಜ್ಯೋತಿಲಕ್ಷ್ಮೀ, ಪದ್ಮ, ಹರಿಹರ ಸುಧಾ, ಸಾವಿತ್ರಮ್ಮ, ಜಗಳೂರು ಭಾರತಿ, ಚನ್ನಮ್ಮ, ಸರೋಜ ಇತರರು ಇದ್ದರು.
- - - -27ಕೆಡಿವಿಜಿ2.ಜೆಪಿಜಿ:ದಾವಣಗೆರೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.