ಸಿಎಂ ಚರ್ಚೆಗೆ ಆಹ್ವಾನಿಸದಿದ್ರೆ ಬೆಂಗಳೂರು ಚಲೋ : ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಗೋಪಾಲ್ ಎಚ್ಚರಿಕೆ

| N/A | Published : Feb 22 2025, 12:50 AM IST / Updated: Feb 22 2025, 01:03 PM IST

ಸಿಎಂ ಚರ್ಚೆಗೆ ಆಹ್ವಾನಿಸದಿದ್ರೆ ಬೆಂಗಳೂರು ಚಲೋ : ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಗೋಪಾಲ್ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಣ್ಣಾ ಹಜಾರೆ-ಸಂತೋಷ ಹೆಗಡೆ ಇವರುಗಳ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಅನಿರ್ದಿಷ್ಟ ಅವಧಿಗೆ ನಡೆಸುವುದಾಗಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಗೋಪಾಲ್ ತಿಳಿಸಿದರು

  ಹಾಸನ : 7 ನೇ ವೇತನ ಆಯೋಗದಲ್ಲಿ ಆರ್ಥಿಕ ನಷ್ಟವಾಗಿದ್ದು, ಒಂದು ವೇಳೆ ಮುಖ್ಯಮಂತ್ರಿಗಳು 10  ದಿನಗಳ ಒಳಗಾಗಿ ನಮ್ಮ ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಅಣ್ಣಾ ಹಜಾರೆ-ಸಂತೋಷ ಹೆಗಡೆ ಇವರುಗಳ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಅನಿರ್ದಿಷ್ಟ ಅವಧಿಗೆ ನಡೆಸುವುದಾಗಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಗೋಪಾಲ್ ತಿಳಿಸಿದರು

. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ದಿನಾಂಕ : ೧-೭-೨೦೨೨ ರಿಂದ ೩೧-೭-೨೦೨೪ರ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ, ನೌಕರ ವರ್ಗದ ೨೬,೭೦೦ ನಿವೃತ್ತರಿಗೆ ೭ನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟದ ಕುರಿತು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಗಮನ ಸೆಳೆಯಲು ಮುಂದಾಗಿದ್ದೇವೆ. ಒಂದು ವೇಳೆ ಮುಖ್ಯಮಂತ್ರಿಗಳು ೧೦ ದಿನಗಳ ಒಳಗಾಗಿ ನಮ್ಮ ಬೇಡಿಕೆ ಈಡೇರಿಕೆ ಕುರಿತು ವರ್ಷಗೆ ಆಹ್ವಾನಿಸದಿದ್ದಲ್ಲಿ ಅಣ್ಣಾ ಹಜಾರೆ-ಸಂತೋಷ ಹೆಗಡೆ ಇವರುಗಳ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸುತ್ತೇವೆ. ಸರಕಾರವು ಸರಕಾರಿ ನೌಕರರಿಗೆ ವೇತನ ಭತ್ಯೆಗಳನ್ನು ಪರಿಷ್ಕರಿಸಲು ಹಾಗೂ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಲು ಡಾ. ಸುಧಾಕರರಾವ್ ಅವರ ನೇತೃತ್ವದಲ್ಲಿ ೭ನೇ ವೇತನ ಆಯೋಗವನ್ನು ರಚಿಸಿತ್ತು. ಸದರಿ ವೇತನ ಆಯೋಗವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುತ್ತದೆ. 

ಸರಕಾರವು ಈ ಸಂಬಂಧ ದಿನಾಂಕ ೨೩-೦೮-೨೦೨೪ರಂದು ವೇತನ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿರುತ್ತದೆ. ಸದರಿ ಆದೇಶದಲ್ಲಿ ದಿನಾಂಕ ೦೧-೦೮-೨೦೨೪ರಿಂದ ವೇತನ ಭತ್ಯೆಗಳ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡಿರುತ್ತದೆ. ವಾಸ್ತವವಾಗಿ ದಿನಾಂಕ ೦೧-೦೭-೨೦೨೨ ರಿಂದಲೇ ಜಾರಿಗೊಳಿಸಬೇಕಾಗಿದ್ದು, ೨೫ ತಿಂಗಳು ಸೇವೆಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿರುತ್ತದೆ ಎಂದು ದೂರಿದರು. 

ನಾವು ಸರಕಾರವನ್ನು ಕೇಳಿಕೊಳ್ಳುವುದೇನೆಂದರೆ ದಿನಾಂಕ ೧-೭-೨೦೨೨ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸವನ್ನು ಕೇಳುತ್ತಿರುವುದಿಲ್ಲ. ಬದಲಾಗಿ ನಾವು ಕೇಳುತ್ತಿರುವುದು ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ ಕೊಡಬೇಕು. ಸರಿಸುಮಾರು ೫ ತಿಂಗಳುಗಳಿಂದ ಕರ್ನಾಟಕ ಸರಕಾರದ, ಮುಖ್ಯಮಂತ್ರಿಗಳ ಗಮನ ಸೆಳೆದು ಬೇಡಿಕೆ ಈಡೇರಿಸಿಕೊಳ್ಳುವ ದಿಸೆಯಲ್ಲಿ ನಾವು ವಿವಿಧ ರೀತಿಯಲ್ಲಿ ಹೋರಾಟಗಳನ್ನು ಕೈಗೊಂಡಿರುತ್ತೇವೆ ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯ ಘಟಕ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿಯವರಿಗೆ ಬೆಂಗಳೂರು ಚಲೋ ಸಮಾವೇಶದಲ್ಲಿ ಖುದ್ದಾಗಿ ಹಾಗೂ ಹತ್ತಾರು ಬಾರಿ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಅರ್ಪಿಸಿ ವಿಷಯ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ರಾಜ್ಯ ಘಟಕ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ಎಲ್. ಭೈರಪ್ಪನವರಿಗೆ ಬೆಂಗಳೂರು ಚಲೋ ಸಮಾವೇಶದಲ್ಲಿ ಖುದ್ದಾಗಿ ಹಾಗೂ ಹತ್ತಾರು ಬಾರಿ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಅರ್ಪಿಸಿ ವಿಷಯ ಮನವರಿಕೆ ಮಾಡಿಕೊಟ್ಟಿದ್ದೇವೆ.

 ರಾಜ್ಯದ ಘನ ಸರಕಾರದ ವಿಧಾನ ಪರಿಷತ್ತಿನ ಸಭಾಪತಿಗಳಿಗೆ, ಉಪ ಸಭಾಪತಿಗಳಿಗೆ, ವಿಧಾನಸಭೆಯ ಸಭಾಪತಿಗಳಿಗೆ, ಉಪ ಸಭಾಪತಿಗಳಿಗೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರದ ಸಚಿವ ಸಂಪುಟದ ಸರ್ವ ಸಚಿವರಿಗೆ, ಆಯಾ ಕ್ಷೇತ್ರಗಳ ಮತದಾರ ನಿವೃತ್ತ ನೌಕರರ ಬೃಹತ್ ನಿಯೋಗದ ಮೂಲಕ ಮನವಿ ಅರ್ಪಿಸಿದ್ದೇವೆ ಎಂದರು. ಒಂದು ವೇಳೆ ಮುಖ್ಯಮಂತ್ರಿಗಳು ಹತ್ತು ದಿನಗಳ ಒಳಗೆ ನಮ್ಮ ಬೇಡಿಕೆ ಈಡೇರಿಸಲು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಫೆಬ್ರವರಿ ೨೮ರ ಶನಿವಾರದಿಂದ ಬೆಂಗಳೂರಿನಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ಸಮಿತಿ ಅಣ್ಣ ಹಜಾರೆ ಹಾಗೂ ಲೋಕಾಯುಕ್ತ ನಿವೃತ್ತ ಅಧಿಕಾರಿ ಸಂತೋಷ್ ಹೆಗಡೆ ಇವರ ಬೆಂಬಲದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಅನಿರ್ದಿಷ್ಟಾವಧಿ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಗಂಗೇಗೌಡ, ನಿಜಗುಣ, ತಾಲೂಕು ಪ್ರಧಾನ ಸಂಚಾಲಕ ಭಾಸ್ಕರ್‌ ಕುಮಾರ್, ಚಂದ್ರಶೆಟ್ಟಿ, ರಾಜ್ಯ ಸಂಚಾಲಕ ಕೆ.ಟಿ. ಪುಟ್ಟಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.