ಸಾರಾಂಶ
1.20 ಲಕ್ಷ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹ । ಜಿಪಂ ಸಿಇಒ ಕೀರ್ತನಾ ಅವರಿಗೆ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ 2016 ಕ್ಕಿಂತ ಮೊದಲು 1 ರಿಂದ 7 ಮತ್ತು 1 ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು, 1 ರಿಂದ 5 ಎಂದು ಪರಿಗಣಿಸಿ ಸರ್ಕಾರ ಆದೇಶಿಸಿದ್ದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯ ವಾಗಿದ್ದು, ಈ ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಆ.12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಬುಧವಾರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಅವರಿಗೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ 2017 ರವರೆಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ ಹೊಸ ವೃಂದ ಮತ್ತು ನೇಮಕಾತಿ ನಿಯಮ ಗಳು 2017 ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಇದನ್ನು ಯಾವುದೇ ಕಾರಣಕ್ಕೂ 2016 ಕ್ಕಿಂತ ಮೊದಲು ನೇಮಕಾತಿ ಆದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆ ಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮೀಕರಿಸಬೇಕೆಂದು ಒತ್ತಾಯಿಸಿದರು.ಇವರನ್ನು 6 ರಿಂದ 8 ಕ್ಕೆ ಪದವೀಧರ ಶಿಕ್ಷಕರೆಂದು ಪರಿಗಣಿಸದೆ ಇರುವುದು ದುರಾದೃಷ್ಟಕರ. ಇದರ ನಡುವೆ 2016 ರಿಂದ ಈಚೆಗೆ 6 ರಿಂದ 8 ವೃಂದದ 20,110 ಶಿಕ್ಷಕರ ನೇಮಕಾತಿಯಾಗಿದ್ದು, ಪರಿಣಾಮವಾಗಿ ಅಷ್ಟೇ ಸಂಖ್ಯೆಯ 1 ರಿಂದ 5 ವೃಂದದ ಶಿಕ್ಷಕರ ಹೆಚ್ಚುವರಿ ಸಮಸ್ಯೆ ಸೃಷ್ಟಿಯಾಗಿತ್ತು. ಆದರೆ, ವರ್ಗಾವಣೆ ಪ್ರಕ್ರಿಯೆಯಲ್ಲೂ ವೃಂದ ಬಲದ ನಿಗಧಿತ ಸ್ಥಳಗಳ ಆಯ್ಕೆಯಲ್ಲಿ ಶಿಕ್ಷಕರಿಗೆ ಸಮಸ್ಯೆ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಆದೇಶದಿಂದ ಬಹುದೊಡ್ಡ ಅನ್ಯಾಯವಾಗಿದೆ ಎಂದು ದೂರಿದರು.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಒಂದು ಕಾರ್ಯಕಾರಿ ಆದೇಶ ಹೊರಡಿಸಬೇಕು. ಉಲ್ಲಂಘನೆ ಯಾಗಿರುವ ನಿಯಮವನ್ನು ಸರಿಪಡಿಸುವ ಜತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಪರಮೇಶ್ವರಪ್ಪ, ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ಪದಾಧಿಕಾರಿಗಳಾದ ಜಗದೀಶ್, ಶ್ರೀನಿವಾಸ್, ವಿಲ್ಮ, ಗೀತಾ, ಚೈತ್ರ ಹಾಗೂ ಶಿಕ್ಷಕರು ಇದ್ದರು.7 ಕೆಸಿಕೆಎಂ 2ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಬುಧವಾರ ಜಿಪಂ ಸಿಇಒ ಕೀರ್ತನಾ ಅವರಿಗೆ ಮನವಿ ಸಲ್ಲಿಸಿದರು.