ಒಳಮೀಸಲಾತಿ ವರದಿ ಬಳಿಕ 19000 ಶಿಕ್ಷಕರ ನೇಮಕ : ಮಧು ಬಂಗಾರಪ್ಪ

| N/A | Published : May 03 2025, 10:04 AM IST

Madhu Bangarappa Karnataka
ಒಳಮೀಸಲಾತಿ ವರದಿ ಬಳಿಕ 19000 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿದ ಬಳಿಕ 19 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿದ ಬಳಿಕ 19 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿತಾಂಶ ಸುಧಾರಣೆಗೆ ಶಿಕ್ಷಕರ ಕೊರತೆ ನೀಗಿಸುವುದು ಮುಖ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 5000 ಶಿಕ್ಷಕರು, ಉಳಿದ ಭಾಗದಲ್ಲಿ 5000 ಸೇರಿ ಒಟ್ಟು 10 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಈಗಾಗಲೇ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದರ ಜೊತೆಗೆ ಇನ್ನೂ ಒಂಬತ್ತು ಹುದ್ದೆಗಳು ಸೇರಿ 19 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ. ನಾಗಮೋಹನದಾಸ್‌ ಸಮಿತಿ ವರದಿ ಬಂದ ಬಳಿಕ ಈ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಈ ಹಿಂದಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಷ್ಟು ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ. ಆದರೆ, ನಾನು ಅದರ ಟೀಕೆ ಮಾಡಲು ಹೋಗುವುದಿಲ್ಲ. ವೆಬ್‌ಕಾಸ್ಟಿಂಗ್‌ ಜಾರಿ ಬಳಿಕ ಪಾರದರ್ಶಕತೆ ಬಂದಿದೆ. ಆದರೆ, ಫಲಿತಾಂಶ ಕಡಿಮೆಯಾಗಿದೆ. ಫಲಿತಾಂಶವನ್ನು ವರ್ಷದಿಂದ ವರ್ಷಕ್ಕೆ ಉತ್ತಮಪಡಿಸಲು ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡುತ್ತೇವೆ. ಓದು ಕರ್ನಾಟಕ, ಕಲಿಕಾ ದೀಪ, ಗಣಕ ಗಣಿತ, ಕಲಿಕಾ ಚಿಲುಮೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಹತ್ತನೇ ತರಗತಿಯಲ್ಲಿ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೂ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸ್ಟುಡಿಯೋಗಳಲ್ಲಿ ಚಿತ್ರೀಕರಣ ನಡೆಸಿ ಆ ಪಠ್ಯಗಳನ್ನು ಶಾಲೆಗಳಲ್ಲಿ ಬಿತ್ತರಿಸಲಾಗುವುದು ಎಂದು ಅವರು ತಿಳಿಸಿದರು.