9337 ಸರ್ಕಾರಿ ಶಾಲೆಗಳಿಗೆ ಪಾತ್ರೆ ಖರೀದಿಗೆ 21.55 ಕೋಟಿ ಬಿಡುಗಡೆ

| N/A | Published : Oct 11 2025, 10:43 AM IST

Chamarajanagar Govt School

ಸಾರಾಂಶ

ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ಯೋಜನೆಯಡಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗಳನ್ನು ಆಧುನೀಕರಿಸಲು ಹೊಸ ಪಾತ್ರೆ ಪರಿಕರಗಳ ಖರೀದಿಗೆ ಸರ್ಕಾರ 21.55 ಕೋಟಿ ರು. ಅನುದಾನ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ.

 ಬೆಂಗಳೂರು :  ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ಯೋಜನೆಯಡಿ ರಾಜ್ಯದ 9,337 ಶಾಲೆಗಳ ಅಡುಗೆ ಮನೆಗಳನ್ನು ಆಧುನೀಕರಿಸಲು ಹೊಸ ಪಾತ್ರೆ ಪರಿಕರಗಳ ಖರೀದಿಗೆ ಸರ್ಕಾರ 21.55 ಕೋಟಿ ರು. ಅನುದಾನ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ.

ಶಾಲೆಗಳಲ್ಲಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಬಿಸಿಯೂಟ ತಯಾರಿಸಲು ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸಲಾಗುತ್ತಿದ್ದು, ಈ ಪಾತ್ರೆಗಳನ್ನು ದೀರ್ಘಾವಧಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅಲ್ಯುಮಿನಿಯಂ ಪಾತ್ರೆಗಳ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಶಾಲೆಗಳಲ್ಲಿ ಅಲ್ಯುಮಿನಿಯಂ ಪಾತ್ರೆಗಳನ್ನು ಬದಲಾಯಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಈ ಬಾರಿ ಆದ್ಯತೆ ಮೇಲೆ ಗುರುತಿಸಿರುವ ವಿವಿಧ ಜಿಲ್ಲೆಗಳ 9337 ಶಾಲೆಗಳಲ್ಲಿ ಹೊಸ ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆಗಳು ಹಾಗೂ ಇತರೆ ಅಡುಗೆ ಪರಿಕರಗಳ ಖರೀದಿಗೆ 21,55,54,000 ರು. ಅನುದಾನವನ್ನು ಕ್ಷೀರಭಾಗ್ಯ ಯೋಜನೆಯ ಅನುದಾನದಲ್ಲಿ ಬಿಡುಗಡೆ ಮಾಡಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸರ್ಕಾರ ಅನುಮತಿ ನೀಡಿದೆ.

ಈ ಅನುದಾನದ ಪೈಕಿ ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಗುರುತಿಸಿರುವ 7,086 ಶಾಲೆಗಳಲ್ಲಿ ಅಕ್ಕಿ ಬೇಯಿಸಲು ಮತ್ತು ತೊಗರಿಬೇಳೆ ಸಾಂಬಾರು ತಯಾರಿಸಲು ಸ್ಟೈನ್‌ ಲೆಸ್‌ ಸ್ಟೀಲ್‌ ಪಾತ್ರೆಗಳ ಖರೀದಿಗೆ 12.60 ಕೋಟಿ ರು. ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಗುರುತಿಸಿರುವ 2,251 ಶಾಲೆಗಳಿಗೆ ಮೊಟ್ಟೆ ಬೇಯಿಸಲು ಸ್ಟೈನ್‌ಲೆಸ್‌ ಟ್ಟೀಲ್‌ ಪಾತ್ರೆ ಖರೀದಿಗೆ, ಎಲ್‌ಪಿಜಿ ಅನಿಲ ಸಂಪರ್ಕ ಸೇರಿ ಇತರೆ ಪರಿಕರಗಳ ವೆಚ್ಚಕ್ಕೆ 8.95 ಕೋಟಿ ರು. ಅನುದಾನ ಬಳಸಲು ಸೂಚಿಸಲಾಗಿದೆ.

Read more Articles on