ಸಾರಾಂಶ
ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಹೆಸರಿನಲ್ಲಿ ₹40 ಸಾವಿರ ಕೋಟಿಗಿಂತ ಹೆಚ್ಚು ಮೊತ್ತದ ಬೃಹತ್ ವಂಚನೆಯ ಹಗರಣ ನಡೆರುವ ಕುರಿತು ರಾಜ್ಯಪಾಲರಿಗೆ ಮತ್ತು ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಮುಖಂಡ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣೆಯ ಹೆಸರಿನಲ್ಲಿ ₹40 ಸಾವಿರ ಕೋಟಿಗಿಂತ ಹೆಚ್ಚು ಮೊತ್ತದ ಬೃಹತ್ ವಂಚನೆಯ ಹಗರಣ ನಡೆರುವ ಕುರಿತು ರಾಜ್ಯಪಾಲರಿಗೆ ಮತ್ತು ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಮುಖಂಡ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲಾ 33 ಸಚಿವರ ವಿರುದ್ಧ ದೂರು ದಾಖಲಿಸಲಾಗಿದೆ. ದೇಶದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯವೊಂದರ ಇಡೀ ಸಚಿವ ಸಂಪುಟ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದಂತಾಗಿದೆ.
ಬೃಹತ್ ವಂಚನೆಯ ಹಗರಣಕ್ಕೆ ಸಂಬಂಧಿಸಿದ 1,570 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ರಮೇಶ್ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಸೇರಿ ಅವರ ಸಚಿವ ಸಂಪುಟದ 33 ಮಂದಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಮೇಶ್, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆಯನ್ನು 25 ವರ್ಷಗಳ ಅವಧಿಗೆ ಪೂರ್ವ ನಿಗದಿತ ಗುತ್ತಿಗೆದಾರ ಸಂಸ್ಥೆಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ₹40 ಸಾವಿರ ಕೋಟಿ ಮೊತ್ತದ ವಂಚನೆಯ ಕಾರ್ಯಕ್ಕೆ ನಿಯಮಬಾಹಿರವಾಗಿ ಅನುಮೋದನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕ ಹಣ ಕಬಳಿಕೆಗೆ ಸಂಚು ಪ್ರಕರಣ ದಾಖಲಿಸಲಾಗಿದೆ ಎಂದರು.
ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳ ಆಡಳಿತಾವಧಿ ಆರು ತಿಂಗಳನ್ನು ಮೀರುವಂತಿಲ್ಲ ಮತ್ತು ಜನಪ್ರತಿನಿಧಿಗಳ ಅವಧಿ ಮುಗಿದ ಆರು ತಿಂಗಳೊಳಗಾಗಿ ಹೊಸ ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಆಗಲೇಬೇಕು ಎಂಬ ಕಡ್ಡಾಯ ನಿಯಮ ಇದೆ. ಆದರೆ, 2020ರ ಸೆ.11ರಿಂದ ಈವರೆಗೆ ಆಡಳಿತಾಧಿಕಾರಿಗಳ ಆಡಳಿತ ಬಿಬಿಎಂಪಿಯಲ್ಲಿ ಮುಂದುವರೆದಿದೆ. ಪ್ರಜಾ ಪ್ರತಿನಿಧಿಗಳು ಇಲ್ಲದ ಅವಧಿಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ಅವಕಾಶ ಇಲ್ಲದಿದ್ದರೂ ಸಹ ಸಂವಿಧಾನದ 74ನೇ ತಿದ್ದುಪಡಿಯಲ್ಲಿನ ನಿಯಮಗಳನ್ನು ಗಾಳಿಗೆ ತೂರಿ ಕಾನೂನುಬಾಹಿರವಾದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಂವಿಧಾನದ ನಿಯಮಗಳನ್ನು ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಸದಸ್ಯರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು.
ಕಪ್ಪು ಪಟ್ಟಿಗೆ ಸೇರಿದ
ಕಂಪನಿಗೆ ಗುತ್ತಿಗೆ
ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು ಏಕೀಕೃತ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆಯ 25 ವರ್ಷಗಳ ಗುತ್ತಿಗೆಯನ್ನು ರಾಮ್ಕಿ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ. ಎಂಬ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿರುವ ಸಂಸ್ಥೆ ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ನೀಡಲು ಹೊರಟಿದೆ. ಈ ಮೂಲಕ 25 ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರರಿಗೆ ₹40 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ಸಾರ್ವಜನಿಕರ ಹಣವನ್ನು ಕಾನೂನು ಬಾಹಿರ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಎನ್.ಆರ್.ರಮೇಶ್ ವಾಗ್ದಾಳಿ ನಡೆಸಿದರು.
ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಮತ್ತು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಸ್ವಾರ್ಥಕ್ಕೋಸ್ಕರ ಬಿಬಿಎಂಪಿಯ ಏಕೀಕೃತ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಹೆಸರಲ್ಲಿ ಪೂರ್ವ ನಿಗದಿತ ಗುತ್ತಿಗೆದಾರ ಸಂಸ್ಥೆಗಳಿಗೆ 25 ವರ್ಷದ ಅವಧಿಯ ಗುತ್ತಿಗೆಗೆ ನೀಡುವ ಮೂಲಕ ₹40 ಸಾವಿರ ಕೋಟಿ ರು.ಗಿಂತ ಹೆಚ್ಚು ವೆಚ್ಛ ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಈ ಮಹಾ ವಂಚನೆಯ ಕಾರ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.